ದಾವಣಗೆರೆ: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹಿಜಾಬ್ ಬಗ್ಗೆ ಮಾತನಾಡುವಾಗ ಸ್ವಾಮೀಜಿಗಳು ಧರಿಸುವ ಪೇಟದ ಬಗ್ಗೆ ಸಣ್ಣ ಮಾತುಗಳನ್ನಾಡಿದ್ದು, ಅವರ ಸ್ಥಾನಕ್ಕೆ ಗೌರವ ತರುವಂತಹದ್ದಲ್ಲ. ಅವರು ತಕ್ಷಣ ಕ್ಷಮೆಯಾಚಿಸಬೇಕು ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಆಗ್ರಹಿಸಿದ್ದಾರೆ.
ದಾವಣಗೆರೆ ನಗರದ ರೇಣುಕ ಮಂದಿರದಲ್ಲಿ ಮಾತನಾಡಿದ ಅವರು, ನ್ಯಾಯಾಲಯ ಈಗಾಗಲೇ ಹಿಜಾಬ್ ವಿಚಾರದಲ್ಲಿ ಸಮವಸ್ತ್ರ ಕಡ್ಡಾಯ ಎಂದು ಆದೇಶ ನೀಡಿದೆ. ಆದ್ರೆ ಈ ಬಗ್ಗೆ ಸಿದ್ದರಾಮಯ್ಯ ಅವರು ಮತ್ತೆ ಮಾತನಾಡುವುದು ಶುದ್ಧ ತಪ್ಪು. ನ್ಯಾಯಾಲಯದ ಆದೇಶ ಪಾಲಿಸುವುದು ಕೂಡ ಎಲ್ಲರ ಆದ್ಯ ಕರ್ತವ್ಯ ಎಂದರು.
ಹಿಜಾಬ್ ಘಟನೆಗೂ, ಸ್ವಾಮೀಜಿಯವರ ಪೇಟಕ್ಕೂ ಯಾವುದೇ ಸಂಬಂಧ ಇಲ್ಲ. ಭಾರತ ಸಂಸ್ಕೃತಿಯ ಪ್ರತೀಕ ಪೇಟ. ಸ್ವಾಮಿ ವಿವೇಕಾನಂದರು ಹಾಗೂ ವಿಶ್ವೇಶ್ವರಯ್ಯ ಕೂಡ ಪೇಟ ಧರಿಸುತ್ತಿದ್ದರು. ಪೇಟ ಧರಿಸುವ ಸಂಪ್ರದಾಯ ರಾಜ್ಯದಲ್ಲಿ ಇದೆ. ಪೇಟ ಧರಿಸಿ ಧರ್ಮ ಪ್ರಸಾರ ಕಾರ್ಯಕ್ರಮಗಳನ್ನು ಸ್ವಾಮೀಜಿಗಳು ಮಾಡುತ್ತಾ ಬಂದಿದ್ದಾರೆ. ಹಾಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ತಕ್ಷಣ ಕ್ಷಮೆ ಕೇಳಿ ಸಮಸ್ಯೆಗೆ ಅಂತಿಮ ತೆರೆಯನ್ನು ಎಳೆಯಬೇಕೆಂದು ಸಲಹೆ ನೀಡಿದರು.
ವೀರಶೈವ ಲಿಂಗಾಯುತ ಸಮಾಜ ಒಡೆಯುವ ಕೆಲಸ ನಡೆದಿತ್ತು: ಈ ಹಿಂದೆ ವೀರಶೈವ ಲಿಂಗಾಯತ ಸಮಾಜ ಒಡೆಯುವ ಕೆಲಸ ನಡೆದಿತ್ತು. ಧರ್ಮವನ್ನು ಒಡೆಯುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿ ಈಗಾಗಲೇ ಆ ಪಕ್ಷಕ್ಕೆ ಹಿನ್ನೆಡೆಯಾಗಿರುವುದು ಗೊತ್ತಿದ್ದರೂ ಕೂಡ ಮತ್ತೆ ಪೇಟದ ವಿಚಾರಕ್ಕೆ ಕೈ ಹಾಕಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ರಾಜ್ಯದ ನಾನಾ ಭಾಗಗಳಿಂದ ಇದರ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ಸಿದ್ದರಾಮಯ್ಯ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಸ್ವಾಮೀಜಿಗಳ ವಸ್ತ್ರದ ಬಗ್ಗೆ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ: ಮನಗೂಳಿ ಸಂಗನಬಸವ ಶ್ರೀ ಕಿಡಿ
ದೇವಸ್ಥಾನದ ಜಾಗ ಹೊರತುಪಡಿಸಿ ಬೇರೆ ಜಾಗದಲ್ಲಿ ವ್ಯಾಪಾರ ಮಾಡಲು ಅನ್ಯಧರ್ಮೀಯರಿಗೆ ಯಾರೇ ತೊಂದರೆ ಕೊಟ್ಟರೂ ಕಾನೂನು ಕ್ರಮ ಜರುಗಿಸುವುದಾಗಿ ಸರ್ಕಾರ ಹೇಳಿದೆ. ಹಾಗಾಗಿ ಈ ವಿಚಾರಕ್ಕೆ ಒತ್ತು ಕೊಡುವುದು ಒಳ್ಳೆಯದಲ್ಲ ಎಂದರು.