ದಾವಣಗೆರೆ: ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟ ಗಾಂಧಿನಗರದ ನಿವಾಸಿ ಕುಮಾರ್ ಎಂಬಾತ ಮೃತಪಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಆತನ ಸಂಬಂಧಿಕರು, ಎಸ್ಪಿ ಹಾಗೂ ಡಿಸಿ ಜೊತೆ ವಾಗ್ವಾದ ನಡೆಸಿದ ಘಟನೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಎದುರು ನಡೆದಿದೆ.
ಜುಲೈ 25 ರಂದು ಕೋವಿಡ್ ಪರೀಕ್ಷೆ ನಡೆಸಿಲ್ಲ. ಆದ್ರೆ ನಿನ್ನೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ವರದಿ ನೀಡಲಾಗಿದೆ. ಒಂದು ದಿನ ಮುನ್ನವೇ ಯಾಕೆ ಪರೀಕ್ಷೆ ಮಾಡಿ ರಿಪೋರ್ಟ್ ನೀಡಲಿಲ್ಲ ಎಂದು ಮೃತ ಕುಮಾರನ ಸಂಬಂಧಿಕರು ಹಾಗೂ ಕುಟುಂಬದವರು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರನ್ನು ಪ್ರಶ್ನಿಸಿದರು. ಈ ವೇಳೆ ಡಿಸಿ ಎಷ್ಟೇ ಸಮಜಾಯಿಷಿ ನೀಡಿದರೂ ತೃಪ್ತರಾಗಲಿಲ್ಲ. ಇದರಿಂದ ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಅಲ್ಲಿಂದ ತೆರಳಿದರು.
ಬಳಿಕ ಎಸ್ಪಿ ಹನುಮಂತರಾಯ ಜೊತೆ ಮಾತಿನ ಚಕಮಕಿ ನಡೆಸಿದ ಮೃತನ ಸಂಬಂಧಿಕರು, ಕುಮಾರ್ ಸಾವಿಗೆ ನ್ಯಾಯ ಬೇಕು ಎಂದು ಒತ್ತಾಯಿಸಿದರು. ಆಗ ಎಸ್ಪಿ ಸಮಾಧಾನಪಡಿಸಲು ಯತ್ನಿಸಿದರೂ ಕೇಳಲಿಲ್ಲ. ಈ ವೇಳೆ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ನನ್ನ ತಮ್ಮನಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿದ್ದರೆ ಬದುಕುಳಿಯುತ್ತಿದ್ದ. ಆದರೆ ನಿನ್ನೆ ತಡವಾಗಿ ಆತನಿಗೆ ಚಿಕಿತ್ಸೆ ನೀಡಲಾಗಿದೆ. ನಿನ್ನೆ ಆತ ಮೃತಪಟ್ಟ ನಂತರ ಕೋವಿಡ್ ಟೆಸ್ಟ್ ಮಾಡಲಾಗಿದೆ. ಮೊದಲೇ ಯಾಕೆ ಟೆಸ್ಟ್ ಮಾಡಿ ಚಿಕಿತ್ಸೆ ನೀಡಲಿಲ್ಲ ಅಂತ ಆತನ ಸಹೋದರ ಉಚ್ಚೆಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.