ಧಾರವಾಡ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗಳಿಬ್ಬರ ಮಧ್ಯೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ವ್ಯಕ್ತಿಯೊಬ್ಬ ಎರಡು ಸುತ್ತು ಗುಂಡು ಹಾರಿಸಿದ ಘಟನೆ ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣ ಸಮೀಪ ಬುಧವಾರ ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿ, ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಸವಾರ ಅಭಿಷೇಕ್ ಬಡ್ಡಿಮನೆ ಎಂಬಾತನನ್ನು ಬಂಧಿಸಿದರೆ, ಪ್ರಜ್ವಲ್, ದಿನೇಶ್ ಮತ್ತು ಗಣೇಶ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಉಪನಗರ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು - ಪ್ರತಿದೂರು ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನಿಡಿದ್ದಾರೆ.
ಆರ್.ಎನ್.ಶೆಟ್ಟಿ ಮೈದಾನದ ಬಳಿ ಈ ಘಟನೆ ನಡೆದಿದೆ. ಇಲ್ಲಿ ಪಿಸ್ತೂಲ್ ಬಳಕೆ ಆಗಿರುವುದು ಕಂಡು ಬಂದಿದೆ. ಸುದ್ದಿ ತಿಳಿದ ತಕ್ಷಣ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಗ್ವಾದದ ವೇಳೆ ಅಭಿಷೇಕ ಬಡ್ಡಿಮನಿ ಗಾಯಗೊಂಡಿದ್ದು, ಈತನನ್ನು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ಗೆ ದಾಖಲಿಸಲಾಗಿದೆ.
''ಬೈಕ್ನಲ್ಲಿ ತಾನು ಹೋಗುತ್ತಿರುವಾಗ ಕಾರು ಗುದ್ದಿಸಿ, ತನ್ನ ಬಳಿ ಇದ್ದ ಪಿಸ್ತೂಲು ಕಸಿದುಕೊಳ್ಳಲು ಯತ್ನಿಸಿ, ಕಾರಿನಲ್ಲಿ ಹೊತ್ತೊಯ್ಯಲು ಮತ್ತು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಅಭಿಷೇಕ್ ದೂರು ನೀಡಿದ್ದರೆ, ಬೈಕ್ ಸವಾರ ಅಭಿಷೇಕ್ ದ್ವಿಚಕ್ರವಾಹನವನ್ನು ಅಡ್ಡಾದಿಡ್ಡಿಯಾಗಿ ವೇಗವಾಗಿ ಚಲಾಯಿಸಿ ನಮ್ಮ ಕಾರಿಗೆ ಗುದ್ದಿಸಿದ್ದಾರೆ. ಕಾರಿನಿಂದ ನಾವು ಇಳಿಯುವಷ್ಟರಲ್ಲಿ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ ಎಂದು ಪ್ರತಿ ದೂರು ದಾಖಲಾಗಿದೆ. ಘಟನೆಯಲ್ಲಿ ಎರಡು ಬುಲೆಟ್ ಫೈರ್ ಆಗಿವೆ. ಒಂದು ಕಾರಿನ ಮುಂದೆ ತಾಗಿದರೆ, ಮತ್ತೊಂದು ಚಾಲಕನ ಸೀಟ್ ಬಳಿ ಇರುವ ಮೀರರ್ಗೆ ತಾಗಿದೆ. ದೇವರ ದಯೆಯಿಂದ ಯಾವುದೇ ಪ್ರಾಣಾಪಾಯ ಆಗಿಲ್ಲ. ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅಭಿಷೇಕ ಬಡ್ಡಿಮನಿ ಬಂಧಿಸಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆತ ಕುಡಿದಿರುವುದು ಗಮನಕ್ಕೆ ಬಂದಿದೆ. ರಾತ್ರಿ ವೇಳೆ ಕ್ರೀಡಾಂಗಣದ ಬಳಿ ಶಸಾಸ್ತ್ರ ಬಳಸಿದ್ದು, ಕೊಲೆ ಪ್ರಕರಣ ಮತ್ತು ಶಸ್ತ್ರಾಸ್ತ್ರ ಕಾಯಿದೆಯಡಿ ಬಂಧಿಸಲಾಗಿದೆ. ಅವನ ದೂರಿನ ಮೇರೆಗೆ ಎದುರುಗಾರ ಮೂವರನ್ನು ವಶಕ್ಕೆ ಪಡೆಯಲಾಗಿದೆ'' ಎಂದು ಶಶಿಕುಮಾರ್ ಮಾಹಿತಿ ನಿಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಗುಂಡಿನ ಸದ್ದು: 'ಗಾಯ್ ಪಾರ್ದಿ ಗ್ಯಾಂಗ್'ನ ಡಕಾಯಿತನ ಮೇಲೆ ಫೈರಿಂಗ್ - firing on accused