ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಿಂದ ಪ್ರಾರಂಭವಾದ ಈ ಪಾದಯಾತ್ರೆಗೆ ಇಂದು ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಶ್ರಿರಾಮುಲು, ಸಂಸದ ದೇವೇಂದ್ರಪ್ಪ ಸೇರಿದಂತೆ ಹಲವರು ಚಾಲನೆ ನೀಡಿದರು.
ಪ್ರಸನ್ನಾನಂದಪುರಿ ಈ ಪಾದಯಾತ್ರೆಯ ನೇತೃತ್ವ ವಹಿಸಿದ್ದು, ಜೂನ್ 24 ರಂದು ಪಾದಯಾತ್ರೆ ಬೆಂಗಳೂರು ತಲುಪಲಿದೆ. ಬಳಿಕ, ಜೂನ್ 25 ರಂದು ಫ್ರೀಡಂ ಪಾರ್ಕ್ನಲ್ಲಿ ಸಮುದಾಯದ ಸಾವಿರಾರು ಜನರೊಂದಿಗೆ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದು ಮತ್ತು ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ನೀಡುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಪಾದಯಾತ್ರೆಯ ಒತ್ತಾಯವಾಗಿದೆ.
ಹಲವು ಮಠಾಧೀಶರ ಬೆಂಬಲ:
ಈ ಪಾದಯಾತ್ರೆಗೆ ಹಲವು ಪೀಠದ ಸ್ವಾಮೀಜಿಗಳು ಬೆಂಬಲ ನೀಡಿದ್ದಾರೆ. ವೀರಶೈವ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಸೇರಿದಂತೆ ಹಲವರು ಪಾದಯಾತ್ರೆಯನ್ನು ಬೆಂಬಲಿಸಿದ್ದಾರೆ. ಮೀಸಲಾತಿ ನೀಡಲೇಬೇಕು, ಕೇಂದ್ರದಲ್ಲಿ 7ರಷ್ಟು ಮೀಸಲಾತಿ ಸಿಗುತ್ತಿದೆ, ರಾಜ್ಯದಲ್ಲಿ ಮಾತ್ರ ನಮಗೆ ಅನ್ಯಾಯ ಆಗಿದೆ, ರಾಜಕೀಯವಾಗಿ ಸರಿಯಾಗಿ ಮೀಸಲಾತಿ ಸಿಕ್ಕಿದೆ, ಆದರೆ ಉದ್ಯೋಗ, ಶೈಕ್ಷಣಿಕವಾಗಿ ಮೀಸಲಾತಿ ದೊರಕಿಲ್ಲ, ಆದ್ದರಿಂದ ಮೀಸಲಾತಿ ಕೊಡಲೇಬೇಕು, ಉಳಿದ 4ರಷ್ಟು ಮೀಸಲಾತಿ ಬೇರೆಡೆಗೆ ಹೋಗಿದೆ ಅದನ್ನು ನಮಗೆ ಕೊಡಲೇ ಬೇಕು, ಇಲ್ಲದಿದ್ದರೆ ಪ್ರತಿಭಟನೆ ಮುಂದುವರಿಯುವುದಾಗಿ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಕೂಡ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ತಾವು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುವುದಾಗಿಯೂ ಹೇಳಿದ್ದಾರೆ.
ಇನ್ನೂ ಶಾಸಕ ಶ್ರೀರಾಮುಲು ಮಾತನಾಡಿ, ನಮಗೆ ಬೇರೆ ಜಾತಿಯೊಂದಿಗೆ ಸಂಘರ್ಷ ಇಲ್ಲ, ನಮಗೆ ಸಿಗಬೇಕಾದ ಮೀಸಲಾತಿ ನಮಗೆ ಪಡೆಯಲು ಈ ಹೋರಾಟ ಮಾಡುತ್ತಿದ್ದೇವೆ, ಈ ಹಿನ್ನೆಲೆ ಸ್ವಾಮೀಜಿಯವರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.