ದಾವಣಗೆರೆ: ಪ್ರತಿಪಕ್ಷದವರಿಗೆ ಲಸಿಕೆ ಜ್ವರ ಬಂದಿದೆ. ಎಲ್ಲದಕ್ಕೂ ವಿರೋಧ ಮಾಡುವಂತಹ ಮಾನಸಿಕತೆ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಿದ್ದು ರಾಹುಲ್, ಸೋನಿಯಾ, ಪ್ರಿಯಾಂಕಾ ಗಾಂಧಿನಾ ಎಂದು ಪ್ರಶ್ನಿಸಿದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್ವೈ ಮೂಲೆ ಗುಂಪಾಗಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪನವರು ನಮ್ಮ ಹಿರಿಯ ನಾಯಕರು. ಅವರಿಗೆ ಸಂಪೂರ್ಣ ಅಧಿಕಾರ ಇದೆ. ಅವರನ್ನು ಯಾರೂ ಮೂಲೆ ಗುಂಪು ಮಾಡಿಲ್ಲ. ರಾಜ್ಯ ಪ್ರವಾಸಕ್ಕೂ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಂಜಾಬ್ನಲ್ಲಿ ಅಮರಿಂದರ್ ಸಿಂಗ್ ಅವರನ್ನು ಅಧಿಕಾರದಿಂದ ಕಿತ್ತು ಹಾಕಿದ್ರು. ಎಲ್ಲಿ ಅವರು ರಾಹುಲ್, ಸೋನಿಯಾಗಿಂತ ಪ್ರಬಲವಾಗಿ ಬೆಳೆಯುತ್ತಾರೋ ಅಂತ ಸಿಎಂ ಸ್ಥಾನದಿಂದ ಕಿತ್ತು ಹಾಕಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ದೇವಾಲಯಗಳ ಹೆಸರಿನಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು ಹಾಕುತ್ತಿದೆ: ಬಿ ವೈ ವಿಜಯೇಂದ್ರ
ಕೋವಿಡ್ ಸಂದರ್ಭದಲ್ಲೂ ಆರ್ಥಿಕತೆ ಚೇತರಿಕೆ ಆಗ್ತಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಯಶಸ್ವಿ ಆಗುತ್ತಿದ್ದೇವೆ. ಮುಂದುವರಿದ ದೇಶಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಹಂಚಿಕೆ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದಂದು ದೇಶದಲ್ಲಿ 2.5 ಕೋಟಿ ಲಸಿಕೆ ಹಾಕಿಸಿದ್ದೇವೆ. ದೇಶದಲ್ಲಿ ಮೊದಲ ಡೋಸ್ ಶೇ.70 ರಷ್ಟು ಜನರಿಗೆ ಕೊಟ್ಟಿದ್ದೇವೆ. ಶೇ.30 ರಷ್ಟು ಜನರಿಗೆ 2ನೇ ಡೋಸ್ ಕೊಟ್ಟಿದ್ದೇವೆ. ಆದರೆ ಮೋದಿ ಜನ್ಮ ದಿನದಂದು ಲಸಿಕಾ ಆಂದೋಲನಕ್ಕೆ ಪ್ರತಿಪಕ್ಷದವರು ವ್ಯಂಗ್ಯ ಆಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.