ದಾವಣಗೆರೆ : ಆಧಾರ್ ಕಾರ್ಡ್ನಲ್ಲಿನ ಲೋಪದೋಷ ಸರಿಪಡಿಸಲು ಜಿಲ್ಲೆಯ ಹರಿಹರದ ಮಂದಿ ಪಡುತ್ತಿರುವ ಪಡಿಪಾಟಲು ಅಷ್ಟಿಷ್ಟಲ್ಲ. ಪಟ್ಟಣದಲ್ಲಿ ತಿದ್ದುಪಡಿ ಕೇಂದ್ರ ತೆರೆಯಲಾಗಿದ್ದರೂ, ನೂರಾರು ಮಂದಿ ರಾತ್ರಿ - ಹಗಲೆನ್ನದೇ ಕಾದು ಕುಳಿತು, ಕಾರ್ಡ್ನಲ್ಲಿ ಆಗಿರುವ ದೋಷಗಳನ್ನು ಸರಿಪಡಿಸಿಕೊಳ್ಳುವ ದುಃಸ್ಥಿತಿ ಎದುರಾಗಿದೆ.
ಹರಿಹರ ನಗರದ ಅಂಚೆ ಕಚೇರಿ ಆವರಣದಲ್ಲಿ, ರಾತ್ರಿಯೇ ಇಲ್ಲಿಗೆ ಬಂದು ಜನ ತಂಗಿದ್ದಾರೆ. ಅಲ್ಲಿಯೇ ಸಿಕ್ಕ ಜಾಗದಲ್ಲಿ ನಿದ್ರೆ ಮಾಡಿ ಬೆಳಗ್ಗೆ ಎದ್ದಿದ್ದಾರೆ. ಪುರುಷರು ಮಾತ್ರವಲ್ಲದೇ, ಮಹಿಳೆಯರೂ ಸಹ ಪುಟ್ಟ ಕಂದಮ್ಮಗಳ ಜೊತೆ ಇಲ್ಲೇ ರಾತ್ರಿ ಕಳೆದಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಅಂಚೆ ಕಚೇರಿಯೇ ಇವರ ತಾತ್ಕಾಲಿಕ ಮನೆಯಂತಾಗಿಬಿಟ್ಟಿದೆ. ಎಲ್ಲರೂ ಇಲ್ಲೇ ಠಿಕಾಣಿ ಹೂಡಿದ್ದಾರೆ. ಆಧಾರ್ ಕಾರ್ಡ್ನಲ್ಲಿ ಲೋಪ ಇರುವ ಕಾರಣದಿಂದ ಹಲವು ಸಮಸ್ಯೆಗಳಾಗಿವೆ. ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಕೆಲವರದ್ದು ಹೆಸರು ತಪ್ಪಾಗಿದ್ದರೆ, ಮತ್ತೆ ಕೆಲವರ ಹೆಬ್ಬೆರಳು ಹೊಂದಾಣಿಕೆ ಆಗ್ತಿಲ್ಲ. ಈ ಕಾರಣಕ್ಕಾಗಿ ಅನ್ನಭಾಗ್ಯದ ಅಕ್ಕಿಯೂ ಸಿಕ್ಕಿಲ್ಲ. ಆಧಾರ್ ಕಾರ್ಡ್ ಸರಿಪಡಿಸಿಕೊಂಡರೆ, ಅಕ್ಕಿ ಕೊಡುವುದಾಗಿ ರೇಷನ್ ಅಂಗಡಿಯವರು ಹೇಳುತ್ತಾರಂತೆ. ಹಾಗಾಗಿ, ಜನರು ಇಲ್ಲಿಗೆ ಬಂದು ಸರಿಪಡಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಸರ್ವರ್ ಸಮಸ್ಯೆ ಇರುವುದರಿಂದ ದಿನಕ್ಕೆ ಕೇವಲ 30 ಜನರ ಕಾರ್ಡ್ಗಳನ್ನ ಮಾತ್ರ ತಿದ್ದುಪಡಿ ಮಾಡಲು ಸಾಧ್ಯವಾಗುತ್ತದೆ ಅಂತಾರೆ ಆಧಾರ್ ಕಾರ್ಡ್ ಸರಿಪಡಿಸುವ ಸಿಬ್ಬಂದಿ. ಅಂಚೆ ಇಲಾಖೆ ಸಿಬ್ಬಂದಿ ಕೆಲಸ ಮಾಡುವುದು ಕೇವಲ ಐದು ಗಂಟೆ ಮಾತ್ರ. ಇದರ ಜೊತೆಗೆ ಆಗಾಗ ಕಂಪ್ಯೂಟರ್ ಸಹ ಕೈಕೊಡುತ್ತೆ. ಇದರಿಂದಾಗಿ ಜನರು ಕಾದು ಕಾದು ಸುಸ್ತಾಗುತ್ತಿದ್ದಾರೆ.
ಕೆಲ ಸಿಬ್ಬಂದಿ ಆಧಾರ್ ಕಾರ್ಡ್ ದೋಷ ಸರಿಪಡಿಸಲು ಹಣದ ಬೇಡಿಕೆಯನ್ನೂ ಇಡುತ್ತಾರೆ ಎಂಬುದು ಜನರ ಆರೋಪ. ಈಗಲಾದರೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಜನರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕಿದೆ.