ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಪ್ರಸ್ತಾಪಕ್ಕೆ ಜಿಲ್ಲಾ ಕ್ರೀಡಾಪಟುಗಳ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಹೈಸ್ಕೂಲ್ ಮೈದಾನದಲ್ಲಿ ನೂರಾರು ಕ್ರೀಡಾಪಟುಗಳು ಪ್ರತಿನಿತ್ಯವೂ ಅಭ್ಯಾಸ ನಡೆಸುತ್ತಾರೆ. ಹಿರಿಯರು ಸೇರಿದಂತೆ ಹಲವಾರು ಮಂದಿ ವಾಯು ವಿಹಾರಕ್ಕೆಂದು ಬರುತ್ತಾರೆ. ಆದ್ರೆ ಇಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡಿದರೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ಕಾರ್ಯಕ್ಕೆ ಜಿಲ್ಲಾಡಳಿತ ಕೈ ಹಾಕಬಾರದು ಎಂದು ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಕೆ. ಶೆಟ್ಟಿ ಎಚ್ಚರಿಕೆ ನೀಡಿದರು.
ಈ ಬಗ್ಗೆ ಈಗಾಗಲೇ ಸಹಿ ಸಂಗ್ರಹಕ್ಕೆ ನಿರ್ಧರಿಸಿದ್ದೇವೆ. ಪರಿಸರ ಮಾಲಿನ್ಯದಿಂದ ಉಂಟಾಗುವ ತೊಂದರೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ಯಾವುದೇ ಕಾರಣಕ್ಕೂ ಹೈಸ್ಕೂಲ್ ಮೈದಾನದಲ್ಲಿ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ನಮ್ಮ ಬೇಡಿಕೆಗೆ ಒಪ್ಪದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ನಗರದ ಮಧ್ಯಭಾಗದಲ್ಲಿರುವುದು ಇದು ಒಂದೇ ಮೈದಾನ. ಇಲ್ಲಿ ಕೇವಲ ಕ್ರೀಡೆಗೆ ಮಾತ್ರ ಅವಕಾಶ ಕಲ್ಪಿಸಿಕೊಡಬೇಕು. ವಾಣಿಜ್ಯ ಉಪಯೋಗಕ್ಕೆ ಬಾಡಿಗೆ ಕೊಡುವುದನ್ನು ನಿಲ್ಲಿಸಬೇಕು. ಬೇರೆ ಬೇರೆ ಜಿಲ್ಲೆಗಳಲ್ಲಿ ಇರುವಂತೆ ಕೆಎಸ್ಆರ್ಟಿಸಿ ಬಸ್ಗಳು ತೆರಳಲು ಅನುಕೂಲವಾಗುವಂತೆ ಈಗಿರುವ ನಿಲ್ದಾಣವನ್ನೇ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.