ದಾವಣಗೆರೆ: ನೂತನ ಜಿಲ್ಲೆ ರಚನೆಯ ಸಮಯ ಹೆರಿಗೆ ನೋವಿದ್ದಂತೆ. ಸ್ವಲ್ಪ ಎಚ್ಚರ ವಹಿಸಿದರೆ ತಾಯಿ-ಮಗು ಇಬ್ಬರೂ ಕ್ಷೇಮವಾಗಿರುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆ ರಚನೆ ಅನಿವಾರ್ಯ. ಆದ್ದರಿಂದ ಈ ಸಂದರ್ಭದಲ್ಲಿ ಎಚ್ಚರ ವಹಿಸಬೇಕಾಗುತ್ತದೆ. ವಿಜಯನಗರ ಜಿಲ್ಲೆ ರಚನೆಗೆ ಶಾಸಕರಿಂದ ಮನವಿ ಬಂದಿದೆ. ಭಾವನಾತ್ಮಕ, ರಾಜಕೀಯಾತ್ಮಕ ಕಾರಣ ಎರಡನ್ನೂ ಇಲ್ಲಿ ಕಾಣುತ್ತೇವೆ. ಆತಂಕ ಬೇಡ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದಿನ ಹೆಜ್ಜೆ ಇಡುತ್ತಿದ್ದೇವೆ ಎಂದರು.
ತಂತಿ ಮೇಲೆ ನಡಿಗೆ ಎಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ದುರುದ್ದೇಶ ಇದ್ದಿದ್ದರೆ 75 ವಯೋಮಿತಿ ಸಡಿಲಿಸಿ ಅವರಿಗೆ ಸಿಎಂ ಸ್ಥಾನ ನೀಡುತ್ತಿರಲಿಲ್ಲ. ಬಿಜೆಪಿಯ ವಯೋಮಿತಿ ಅನುಶಾಸನ ಮೀರಿ ಅವರಿಗೆ ಸಿಎಂ ಸ್ಥಾನ ನೀಡಲಾಗಿದೆ. ಆ ಹೇಳಿಕೆಗೆ ವಿಪರೀತ ಅರ್ಥ ಕಲ್ಪಿಸುವುದು ಬೇಡ. ನನ್ನನ್ನು ಸೇರಿದಂತೆ ಎಲ್ಲರದ್ದು ತಂತಿ ಮೇಲೆ ನಡಿಗೆಯೇ ಎಂದು ಹೇಳಿದರು.
ಉಪ್ಪು ತಿಂದವರು ನೀರು ಕುಡಿಯಲೇಬೇಕು: ಸಾರ್ವಜನಿಕ ಜೀವನದಲ್ಲಿ ಅನುಮತಿ ಇಲ್ಲದೇ ಬೇರೆಯವರ ಫೋನ್ ಕದ್ದಾಲಿಕೆ ಮಾಡಿದರು. ಅದು ಅಕ್ಷಮ್ಯ ಅಪರಾಧ. ಸಿಬಿಐ ತನಿಖೆ ನಡೆಸುತ್ತಿದೆ. ದೃಢಪಟ್ಟರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅದರಲ್ಲೂ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಅದಕ್ಕಿಂತ ಪಾಪ ಇನ್ನೊಂದಿಲ್ಲ. ಸರಿಪಡಿಸಿಕೊಳ್ಳಲಾಗದ ಪಾಪ ಇದು ಎಂದು ಕಿಡಿಕಾರಿದರು.