ದಾವಣಗೆರೆ : ಎಷ್ಟೇ ಆದ್ರು ನೀವು ಸಾಂದರ್ಭಿಕ ಶಿಶು ತಾನೆ.. ಸಮ್ಮಿಶ್ರ ಸರ್ಕಾರದಲ್ಲಿ ನಾನು ಕೇವಲ ಗುಲಾಮನಾಗಿದ್ದೆ ಎಂದು ಹೇಳುವಾಗ ನಿಮಗೆ ಸ್ವಾಭಿಮಾನ ಅಡ್ಡಿಬರಲಿಲ್ಲವೇ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸರಣಿ ಟ್ವೀಟ್ ಮಾಡುವ ಮೂಲಕ ವಾಗ್ಬಾಣ ಬಿಟ್ಟಿದ್ದಾರೆ.
ಹಿಂದೂ ಪರ ಸಂಘಟನೆಗಳ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಧ್ವನಿ ಎತ್ತಿದ ಬೆನ್ನಲ್ಲೇ ಶಾಸಕ ರೇಣುಕಾಚಾರ್ಯ ಸರಣಿ ಟ್ವೀಟ್ ಮಾಡುವ ಮೂಲಕ ಕುಟುಕಿದ್ದಾರೆ. ಅಧಿಕಾರಕ್ಕಾಗಿ ಯಾವ ಪಕ್ಷದ ಜೊತೆಯಲ್ಲಾದ್ರು ಹೊಂದಾಣಿಕೆ ಮಾಡಿಕೊಳ್ಳುವ ಜಾಯಮಾನದವರು ನೀವು. ಅಧಿಕಾರ ಹಸ್ತಾಂತರ ಮಾಡುವಾಗ ಒಪ್ಪಂದದ ನಾಟಕವಾಡಿದ ವಚನಭ್ರಷ್ಟರು ಯಾರು? ನನ್ನಿಂದಲೇ ಕರ್ನಾಟಕದಲ್ಲಿ ಬಿಜೆಪಿ ಮರುಜನ್ಮ ಪಡೆಯಿತೆಂದು ಹೇಳುವ ನಿಮಗೆ ಕೃತಜ್ಞತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
2006ರಲ್ಲಿ ನಾವು ಜೆಡಿಎಸ್ಗೆ ಬೆಂಬಲ ನೀಡಿ ಸರ್ಕಾರ ರಚಿಸದಿದ್ದರೆ ಅಂದೇ ನಿಮ್ಮ ಪಕ್ಷ ಹೇಳ ಹೆಸರಿಲ್ಲದಂತೆ ಕಾಣೆಯಾಗುತ್ತಿತ್ತು. ನಿಮ್ಮ ಸರ್ಕಾರವನ್ನು ಮುಗಿಸಲು ಇಬ್ಬರು ಮಹಾನ್ ನಾಯಕರು ಮುಂದಾಗಿದ್ದು ನಿಮಗೆ ಗೊತ್ತಿಲ್ಲವೇ?, ಹಿಂದೂ ಸಂಘಟನೆಗಳ ವಿರುದ್ಧ ಏಕಾಏಕಿ ಮುಗಿಬಿದ್ದಿರುವುದರ ಹಿಂದೆ ನಿಜವಾದ ಜನಹಿತ ಇದ್ದರೆ, ಗಂಗೊಳ್ಳಿಯಲ್ಲಿ ಮೀನು ಖರೀದಿಸಬಾರದೆಂದು ಹುಕುಂ ಹೊರಡಿಸಿದವರ ವಿರುದ್ಧ ಏಕೆ ಸೊಲ್ಲೆತ್ತಿಲ್ಲ?, ಕೇವಲ ಹಿಂದೂಗಳು ಹಿಂದೂ ಸಂಘಟನೆಗಳು ನಿಮ್ಮ ಕಣ್ಣಿಗೆ ಸಮಾಜ ಘಾತುಕರಂತೆ ಕಂಡರೆ, ಶಿವಮೊಗ್ಗದಲ್ಲಿ ಅಮಾಯಕ ಹರ್ಷ ಕೊಲೆ ಮಾಡಿದವರು ಯಾರು ಎಂದು ಹೆಚ್ಡಿಕೆ ವಿರುದ್ಧ ಕುಟುಕಿದರು.
ಬಿಜೆಪಿ ಶ್ರೀಮಂತ ಪಕ್ಷ ಎನ್ನುವುದಾದರೆ ನೀವು ರಾಮನಗರದಲ್ಲಿ ರೇಷ್ಮೆ, ಹಾಸನದಲ್ಲಿ ಆಲೂಗಡ್ಡೆ ಬೆಳೆದು ಪಕ್ಷ ಸಂಘಟನೆ ಮಾಡುತ್ತೀರಾ?, ತಾಜ್ ವೆಸ್ಟ್ ಎಂಡ್ ಹೋಟೆಲ್ ಅನ್ನೇ ಸಿಎಂ ಕಚೇರಿ ಮಾಡಿಕೊಂಡಿದ್ದ ನೀವು ಅಧಿಕಾರ ಇದ್ದಾಗ ಜನರ ಕೈಗೆ ಸಿಗದೇ, ಈಗ ಬಡವರ ಬಗ್ಗೆ ಅಣಿಮುತ್ತು ಉದುರಿಸುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ ಎಂದು ರೇಣುಕಾಚಾರ್ಯ ಅವರು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶ್ರೀಲಂಕಾ ಪ್ರಧಾನಿ ಪುತ್ರ