ದಾವಣಗೆರೆ: ತನ್ನ ಮಗ ಸಾವನ್ನಪ್ಪಿದ್ದರೂ ಈತ ನನ್ನ ಮಗನೇ ಅಲ್ಲ ಎಂದು ಹೇಳಿ ಮನೆಗೆ ಬೀಗ ಜಡಿದು ತಾಯಿ ಪರಾರಿಯಾಗಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ವಿನೋಬನಗರ ನಿವಾಸಿ ಕರಿಬಸಪ್ಪ ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ ಕರಿಬಸಪ್ಪರ ಅಂತ್ಯ ಸಂಸ್ಕಾರಕ್ಕೆ ಅವಕಾಶ ಇಲ್ಲದಂತಾಗಿದೆ. ಮೃತನ ತಾಯಿ ನೋಡಿದರೆ ಸತ್ತಿರುವುದು ನನ್ನ ಮಗನೇ ಅಲ್ಲ ಎಂದು ಹೇಳಿ ಮನೆಗೆ ಬೀಗ ಹಾಕಿ ಹೋಗಿದ್ದಾಳೆ. ಇಂಥ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ದಾವಣಗೆರೆಯ ದೊಡ್ಡಬಾತಿ ಗ್ರಾಮ.
ಮೃತ ಕರಿಬಸಪ್ಪರ ತಾಯಿ ಸಿದ್ದಮ್ಮ ಹಾಗೂ ತಂದೆ ಸಿದ್ದಲಿಂಗಪ್ಪ ಎಂದು ಹೇಳಲಾಗಿದೆ. ಸಿದ್ದಮ್ಮ ಮತ್ತು ಸಿದ್ದಲಿಂಗಪ್ಪ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಇವರ ಸಂಬಂಧಕ್ಕೆ ಮದುವೆ ಮೊದಲೇ ಹುಟ್ಟಿದ ಮಗು ಕರಿಬಸಪ್ಪ ಎಂದು ಆ ಮಗುವನ್ನ ಬೇರೆಯವರಿಗೆ ನೀಡಿ ಹೋಗಿದ್ದರಂತೆ. ಕರಿಬಸಪ್ಪರಿಗೆ ಬೆಳೆದು ದೊಡ್ಡವನಾದ ಬಳಿಕ ಅವರಿಗೆ ಉಮಾ ಎಂಬವರ ಜೊತೆ ಮದುವೆಯಾಗಿದ್ದು, ಒಬ್ಬ ಮಗನೂ ಇದ್ದಾನೆ. ಹಲವು ವರ್ಷಗಳ ಬಳಿಕ ಕರಿಬಸಪ್ಪರ ತಾಯಿ ಸಿದ್ದಮ್ಮ ದಾವಣಗೆರೆಯ ದೊಡ್ಡಬಾತಿ ಗ್ರಾಮದಲ್ಲಿ ನೆಲೆಸಿದ್ದಾಳೆ ಎಂಬ ವಿಷಯ ತಿಳಿದ ಕರಿಬಸಪ್ಪ ಆಗಾಗ ತಾಯಿಯನ್ನು ಮಾತನಾಡಿಸಿಕೊಂಡು ಬರುತ್ತಿದ್ದರಂತೆ.
ಇದೀಗ ಕರಿಬಸಪ್ಪ ಹೃದಾಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಹುಟ್ಟೂರಲ್ಲೇ ಅಂತ್ಯ ಸಂಸ್ಕಾರ ಮಾಡಬೇಕೆಂದು ಇಚ್ಛಿಸಿದ ಕರಿಬಸಪ್ಪರ ಹೆಂಡತಿ ಹಾಗೂ ಮಗ ದೊಡ್ಡಬಾತಿ ಗ್ರಾಮಕ್ಕೆ ಶವವನ್ನು ತೆಗೆದುಕೊಂಡು ಬಂದಿದ್ದಾರೆ. ಆದರೆ ತಾಯಿ ಸಿದ್ದಮ್ಮ ಮಾತ್ರ ಇವನು ನನ್ನ ಮಗನೇ ಅಲ್ಲ ಎಂದು ಹೇಳಿ ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ. ಸಿದ್ದಮ್ಮಳ ಹೆಸರಲ್ಲಿ ಸ್ವಲ್ಪ ಆಸ್ತಿ ಇದ್ದು, ಕರಿಬಸಪ್ಪರನ್ನು ತನ್ನ ಮಗ ಎಂದು ಒಪ್ಪಿಕೊಂಡರೆ ಮಗನ ಹೆಸರಿನಲ್ಲಿ ಆಸ್ತಿ ಕೊಡಬೇಕಾಗುತ್ತದೆ ಎಂದು ಸಿದ್ದಮ್ಮ ಹೀಗೆ ಮಾಡಿ ಹೋಗಿದ್ದಾರೆ ಎಂದು ಕರಿಬಸಪ್ಪರ ಹೆಂಡತಿ ಹಾಗೂ ಮಗ ಆರೋಪಿಸುತ್ತಿದ್ದಾರೆ.
ಅಲ್ಲದೇ ಗ್ರಾಮದ ಜನರು ಕೂಡ ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡುತ್ತಿಲ್ಲ. ಹೀಗಾಗಿ ಕರಿಬಸಪ್ಪನ ಮೃತದೇಹವನ್ನ ಸಿದ್ದಮ್ಮನ ಮನೆ ಮುಂದೆ ಇಟ್ಟು, ಕಣ್ಣೀರಿಡುತ್ತಾ ನಮಗೆ ನ್ಯಾಯ ಬೇಕೆಂದು ತಾಯಿ-ಮಗ ಅಳಲು ತೋಡಿಕೊಳ್ಳುತ್ತಿದ್ದಾರೆ.