ದಾವಣಗೆರೆ: ಸಿಡಿಲು ಬಡಿದು 40ಕ್ಕೂ ಹೆಚ್ಚು ಕುರಿ, ಮೇಕೆಗಳು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾಚನಾಯಕನ ಹಳ್ಳಿಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದರಿಂದ ಈ ಅವಘಡ ನಡೆದಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಗೊಲ್ಲರಹಳ್ಳಿಯ ಕುರಿಗಾಹಿಗಳಾದ ಚಿತ್ತಪ್ಪ, ಕಾಟಪ್ಪ ಎಂಬುವರಿಗೆ ಸೇರಿದ ಕುರಿ, ಮೇಕೆಗಳೆಂದು ತಿಳಿದು ಬಂದಿದೆ. ಒಮ್ಮೆಲೆ 40ಕ್ಕೂ ಅಧಿಕ ಕುರಿ, ಮೇಕೆಗಳು ಸಾವನ್ನಪ್ಪಿದ್ದರಿಂದ ಲಕ್ಷಾಂತರ ರೂ.ನಷ್ಟವಾಗಿದೆ. ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಇನ್ನು ಮಾಹಿತಿ ತಿಳಿದು ಘಟನ ಸ್ಥಳಕ್ಕಾಗಮಿಸಿದ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷ ಅವರು ಪರಿಶೀಲನೆ ನಡೆಸಿ, ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಇದಲ್ಲದೇ, ದಾವಣಗೆರೆ ಪಿಜೆ ಬಡಾವಣೆಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಅನಾಹುತ ತಪ್ಪಿದೆ.