ದಾವಣಗೆರೆ: ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ರೈತ ದಂಪತಿ ಮಾತಿಗೆ ಬೆಲೆ ಕೊಟ್ಟು ಭೂಮಿಯಲ್ಲಿ ಬೀಜ ಬಿತ್ತನೆ ಮಾಡಿದ್ದಾರೆ. ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಅವರು ರೈತರೊಂದಿಗೆ ಇಂದು ಬೀಜ ಬಿತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ನ್ಯಾಮತಿ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ರೈತರು ಬಿತ್ತನೆ ಆರಂಭಿಸಿದ್ದಾರೆ. ಆರುಂಡಿ ಗ್ರಾಮದ ತಮ್ಮ ಜಮೀನಿನಲ್ಲಿ ಸುಶೀಲಮ್ಮ ಹಾಗೂ ಕೃಷ್ಣಪ್ಪ ದಂಪತಿ ಈರುಳ್ಳಿ, ಮೆಂತೆ ಬಿತ್ತನೆಯಲ್ಲಿ ತೊಡಗಿದ್ದರು. ಈ ವೇಳೆ ರೇಣುಕಾಚಾರ್ಯ ಸ್ಥಳಕ್ಕೆ ಆಗಮಿಸಿದಾಗ, ರೈತ ದಂಪತಿ ತಮ್ಮ ಜಮೀನಿನಲ್ಲಿ ಕೂರಿಗೆ ಮಾಡ್ಬೇಕು ಎಂದು ಮನವಿ ಮಾಡಿದರು. ಇದಕ್ಕೆ ಇಲ್ಲ ಎನ್ನದ ಶಾಸಕರು ಎರಡು ಸುತ್ತು ಕೂರಿಗೆ ಹೊಡೆದು ರೈತರ ಗಮನ ಸೆಳೆದರು.
ಮಾದೇನಹಳ್ಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ರೇಣುಕಾಚಾರ್ಯ:
ಮಹಾರಾಷ್ಟ್ರದಿಂದ ಹೊನ್ನಾಳಿ ತಾಲೂಕಿನ ಮಾದೇನಹಳ್ಳಿ ಗ್ರಾಮಕ್ಕೆ ಬಂದಿದ್ದ 26 ವರ್ಷದ ಯುವಕನಲ್ಲಿ ಕೊರೊನಾ ಸೋಂಕು ದೃಢಪಟ್ಟ ಕಾರಣ ಆತನ ತಾಯಿ ಹಾಗೂ ತಮ್ಮನನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾದೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಕೊರೊನಾ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಕಂಟೇನ್ಮೆಂಟ್ ಝೋನ್ ನಲ್ಲಿರುವ ಕುಟುಂಬಗಳಿಗೆ 60 ಆಹಾರದ ಕಿಟ್ ನೀಡುವ ಜೊತೆ ಪ್ರತಿನಿತ್ಯ ಅಗತ್ಯ ತರಕಾರಿ ಪೂರೈಸುವುದಾಗಿ ಭರವಸೆ ನೀಡಿದ್ರು.