ದಾವಣಗೆರೆ: ವಿಜಯಪುರದ ಶಾಸಕ ಪೋನ್ ಮಾಡಿ, ನಾನೇ ಮುಂದಿನ ಮುಖ್ಯಮಂತ್ರಿ. ನನಗೆ ಸಹಕಾರ ಕೊಡಿ ಎಂದಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಹೊನ್ನಾಳಿಯಲ್ಲಿ ಮಾತನಾಡಿದ ಅವರು, ವಿಜಯಪುರ ಶಾಸಕ ಕೆಲ ಎಂಎಲ್ಎಗಳಿಗೆ ಫೋನ್ ಮಾಡಿದ್ದಾರೆ. ನಾನೇ ಮುಂದಿನ ಸಿಎಂ ನನಗೆ ಬೆಂಬಲ ನೀಡಿ ಎಂದಿದ್ದಾರೆ ಎಂದು ಆರೋಪಿಸಿದರು.
ಹೈ ಕಮಾಂಡ್ನಿಂದ ಸ್ಪಷ್ಟ ಸೂಚನೆ ಬಂದಿದ್ದರೂ ಸಹ ಈ ರೀತಿ ಮಾತನಾಡ್ತಾರೆ. ಕೆಲವರು ಸಿಎಂ ಆಗಬೇಕು ಅಂತ ಈಗಾಗಲೇ ಸೂಟುಬೂಟು ಹೊಲಿಸಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ ಬೆಲ್ಲದ ಬಗ್ಗೆ ವ್ಯಂಗ್ಯವಾಡಿದರು.
ಅರುಣ್ ಸಿಂಗ್ ಅವರಿಗೆ ಕರೆ ಮಾಡಿದ್ದೆ, ಇಂದು ಸಂಜೆ 4.30ಕ್ಕೆ ಭೇಟಿಯಾಗಲು ಬನ್ನಿ ಎಂದಿದ್ದರು. ಆದರೆ ನಾನು ಕೋವಿಡ್ ಕೇರ್ ಸೆಂಟರ್ನಲ್ಲಿದ್ದೀನಿ ಬರೋಕೆ ಆಗಲ್ಲ ಅಂದೆ. ಇದೇ ತಿಂಗಳು 17ರಂದು ಸಮಯ ಕೇಳಿದ್ದೇನೆ. ಕೊಡುತ್ತೇನೆ ಎಂದಿದ್ದಾರೆ. ಕೆಲವರು ಅರುಣ್ ಸಿಂಗ್ ರಾಜ್ಯಕ್ಕೆ ಬಂದರೂ ಸಹ ದೆಹಲಿಗೆ ಹೋಗಿದ್ದಾರೆ. ಇನ್ನು ಯಡಿಯೂರಪ್ಪ ಅವರು ಒಳ್ಳೆಯ ಕೆಲಸ ಮಾಡ್ತಾ ಇದ್ದಾರೆ. ರಾಷ್ಟ್ರೀಯ ನಾಯಕರು ಹೇಳಿದ ಮೇಲೂ ಬಹಿರಂಗವಾಗಿ ಭಿನ್ನಮತ ನಡೆಸುತ್ತಾರೆ. ಯಾರೇ ತಪ್ಪು ಮಾಡಿದ್ರೂ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.