ದಾವಣಗೆರೆ: ನಾನು ಸಚಿವನಾಗಬೇಕಿತ್ತು, ಆದರೆ ನಿಗಮ ಮಂಡಳಿ ಅಧ್ಯಕ್ಷನಾಗಿದ್ದೇನೆ. ಸಚಿವ ಸಂಪುಟ ವಿಸ್ತರಣೆ ವೇಳೆ ನನಗೆ ಸ್ಥಾನ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಲಿಸ್ಟ್ ನಲ್ಲಿ ನನ್ನ ಹೆಸರು ಇಲ್ಲದಿರಬಹುದು. ಆದ್ರೆ ಸಿಎಂ ಬಿಎಸ್ವೈ ಅವರ ಮನಸ್ಸಿನಲ್ಲಿದ್ದೇನೆ ಎಂದು ಬಿಜೆಪಿ ಶಾಸಕ ಚಂದ್ರಪ್ಪ ಹೇಳಿದ್ದಾರೆ.
ಕೆಎಸ್ಆರ್ಟಿಸಿ ಡಿಪೋ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಪಕ್ಷ ಕಟ್ಟಲು ಮುಂದಾದಾಗ ಆರು ತಿಂಗಳ ಮೊದಲೇ ನಾನು ರಾಜೀನಾಮೆ ನೀಡಿದ್ದೆ. ಆಗ ಯಾವ ಸಚಿವರು, ಶಾಸಕರು ರಾಜೀನಾಮೆ ನೀಡಿರಲಿಲ್ಲ. ಮೊದಲಿನಿಂದಲೂ ನಾನು ಯಡಿಯೂರಪ್ಪ ಅವರ ಮಾತಿಗೆ ಬದ್ಧನಾಗಿದ್ದೇನೆ. ಈಗಲೂ ನಿಷ್ಟನಾಗಿರುತ್ತೇನೆ ಎಂದು ತಿಳಿಸಿದರು.
ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿ, ಬದಲಾವಣೆ ಪ್ರಶ್ನೆಯೇ ಇಲ್ಲ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ ಎಂದಿದ್ದರು. ಈಗಲೂ ಅದನ್ನೇ ಹೇಳಬೇಕಷ್ಟೇ. ಪ್ರತಿಯೊಬ್ಬ ಶಾಸಕನಿಗೆ ಸಚಿವನಾಗಬೇಕೆಂಬ, ಸಚಿವರಿಗೆ ಸಿಎಂ ಆಗಬೇಕೆಂಬ ಆಸೆ ಇರುತ್ತೆ. ಅದರಲ್ಲಿ ತಪ್ಪೇನಿಲ್ಲ. ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಭಿನ್ನಮತ ಸ್ಫೋಟ ಆಗಲ್ಲ. ಯಡಿಯೂರಪ್ಪರ ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹ ಎಂದು ಶಾಸಕ ಚಂದ್ರಪ್ಪ ಹೇಳಿದರು.