ದಾವಣಗೆರೆ: 1945ರ 2ನೇ ಮಹಾಯುದ್ಧದಲ್ಲಿ ಅಮೆರಿಕ ಜಪಾನ್ ದೇಶದ ಹಿರೋಶಿಮಾ ಹಾಗೂ ನಾಗಾಸಾಕಿ ನಗರಗಳ ಮೇಲೆ ಹಾಕಿದ ಪರಮಾಣು ಬಾಂಬ್ನಿಂದ ಜಪಾನ್ ಬಹುತೇಕ ಸರ್ವನಾಶ ಎಂದುಕೊಂಡಿದ್ದರು. ಆದರೆ, ಅಂದು ಅಲ್ಲೊಬ್ಬ ಚಿಂತಕ ದೇಶಕ್ಕೆ ಮರುಜೀವ ನೀಡಲು, ನಗರ ಅರಣ್ಯೀಕರಣ ಪದ್ಧತಿ ಅನುಷ್ಠಾನಕ್ಕೆ ತರಲು ಪಣತೊಟ್ಟಿದ್ದ. ಪರಿಣಾಮ ಜಪಾನ್ ಪುಟಿದೆದ್ದಿತು. ಇದೀಗ ಆ ಮಾದರಿ ಅನುಷ್ಠಾನಕ್ಕೆ ದಾವಣಗೆರೆ ನಗರ ಸಜ್ಜಾಗಿದೆ.
ಪರಮಾಣು ಬಾಂಬ್ ದಾಳಿ ಪರಿಣಾಮ ಜಪಾನ್ನ ಜೀವ ಸಂಕುಲವೇ ಸರ್ವನಾಶವಾಗಿತ್ತು. ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಅಮೆರಿಕ ಹಾಕಿದ ಬಾಂಬ್ನ ತೀವ್ರತೆಯಿಂದ ಜನ ಬದುಕುವುದು ಕಷ್ಟ ಸಾಧ್ಯವಾಗಿತ್ತು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಇಡೀ ದೇಶಕ್ಕೆ ಆಸರೆಯಾದವನು ಚಿಂತಕ, ಪರಿಸರ ಪ್ರೇಮಿ 'ಅಕಿರಾ ಮಿಯಾವಾಕಿ'.
ಜೀವ ಸಂಕುಲ ಮರು ಸೃಷ್ಟಿ ಹೇಗೆ ಮಾಡಬಹುದು ಎಂಬುದನ್ನರಿತ ಈತ ಇಡೀ ಜಗತ್ತಿಗೆ ಪ್ರಾಯೋಗಿಕವಾಗಿ ಮಾಡಿ ತೋರಿಸಿದ ನಗರ ಅರಣ್ಯೀಕರಣ ಪದ್ಧತಿ (ಮಿಯಾವಾಕಿ ಅರಣ್ಯ ಪದ್ಧತಿ) ಇದೀಗ ದಾವಣಗೆರೆಯಲ್ಲಿ ಜಾರಿಗೆ ತರಲಾಗಿದೆ. ದಾವಣಗೆರೆ ತರಳುಬಾಳು ಕೃಷಿ ವಿಜ್ಞಾನ ಕೇಂದ್ರ 40 ಅಡಿ ಅಗಲ ಹಾಗೂ 100 ಅಡಿ ಉದ್ದದ ಸ್ಥಳದಲ್ಲಿ ಒಂದು ಸಾವಿರ ಸಸಿಗಳನ್ನ ಮಿಯಾವಾಕಿ ಮಾದರಿಯಲ್ಲಿ ಬೆಳೆಸಲಾಗಿದೆ. ಒಂದು ವರ್ಷದ, ಎರಡು ವರ್ಷದ ಹಿಂದೆ ನೆಡಲಾಗಿದ್ದ ಗಿಡಗಳು ಇದೀಗ ಸಮೃದ್ಧವಾಗಿ ಬೆಳೆದಿವೆ.
ಏನಿದು 'ಮಿಯಾವಾಕಿ ಅರಣ್ಯ ಪದ್ಧತಿ'?:
ಕಡಿಮೆ ಜಾಗದಲ್ಲಿ ಗಿಡಗಳನ್ನು ಒತ್ತು ಒತ್ತಾಗಿ ಬೆಳೆಸಿ ದಟ್ಟ ಅರಣ್ಯ ಮಾಡುವ ವಿಧಾನವನ್ನು ಜಪಾನಿನ ಮಿಯಾವಾಕಿ ಅರಣ್ಯ ಮಾದರಿ ಎನ್ನುತ್ತಾರೆ. ಐದು ವರ್ಷಗಳಲ್ಲಿ ಬೆಳೆಯುವ ಮರಗಳು ಕೇವಲ ಎರಡೇ ವರ್ಷದಲ್ಲಿ ಅದ್ಭುತವಾಗಿ ಬೆಳೆಸುವ ಮಾದರಿ ಇದಾಗಿದೆ. ಸಾಲು ಸಾಲುಗಳಲ್ಲಿ ಸಸಿಗಳ ನಡುವೆ ಸ್ವಲ್ಪ ಅಂತರ ಬಿಟ್ಟು ನೆಟ್ಟು ತಿಂಗಳಿಗೊಮ್ಮೆ ನೀರು ಕೊಟ್ಟು ಸುಮಾರು ಇನ್ನೂರು ಜಾತಿಯ ವಿವಿಧ ಮರಗಳನ್ನು ಬೆಳೆಯಬಹುದಾಗಿದೆ.
ಜಪಾನ್ಗೂ ದಾವಣಗೆರೆಗೂ ಮಿಯಾವಾಕಿ ಮಾದರಿಯ ನಂಟು ಬೆಳೆದಿದೆ. ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಎಸ್.ಟಿ ವೀರೇಶ್ ಹಾಗೂ ಆಯುಕ್ತ ವಿಶ್ವನಾಥ ಮುದಜ್ಜಿ ಅವರಿಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಪಾನ್ ಮಿಯಾವಾಕಿ ಮಾದರಿ ಅರಣ್ಯ ಪದ್ದತಿ ಬಗ್ಗೆ ತಿಳಿದುಕೊಂಡು ಇಡೀ ನಗರದಲ್ಲಿ 15 ಕಡೆ ಪಾಲಿಕೆ ಖಾಲಿ ಜಾಗದಲ್ಲಿ ಅರಣ್ಯೀಕರಣ ಮಾಡಲು ಮುಂದಾಗಿದ್ದಾರೆ.
ಈ ಕಾಲೋನಿಗಳಲ್ಲಿ ಮಿಯಾವಾಕಿ ಮಾದರಿ ಅನುಸರಣೆ
ಈಗಾಗಲೇ ಡಿಸಿಎಂಟೌನ್ ಶೀಪ್ ಹಾಗೂ ಶಾಮನೂರಿನ ಡಾಲರ್ಸ್ ಕಾಲೋನಿಯಲ್ಲಿ ತಲಾ ಒಂದು ಸಾವಿರ ಸಸಿಗಳನ್ನು ಮಿಯಾವಾಕಿ ಮಾದರಿಯಲ್ಲಿ ಹಾಕಲಾಗಿದೆ. ಅವು ಸಮೃದ್ಧಿವಾಗಿ ಬೆಳೆಯುತ್ತಿವೆ. ಇನ್ನೇರಡು ವರ್ಷಗಳಲ್ಲಿ ಬಹುತೇಕ ಕಡೆ ಸ್ಮಾರ್ಟ್ ಸಿಟಿ ಹೋಗಿ ಗ್ರೀನ್ ಸಿಟಿ ಆಗಲಿದೆಯಂತೆ.
ಜಪಾನ್ ತತ್ತಸಿ ಹೋಗಿದ್ದಾಗ ಪರಿಸರ ಪ್ರೇಮಿ ಮಿಯಾವಾಕಿ ಅವರ ನಗರ ಅರಣ್ಯೀಕರಣ ಪದ್ಧತಿ ಇಡೀ ಜೀವ ಸಂಕುಲವನ್ನೇ ಮರುಸೃಷ್ಟಿ ಮಾಡಿತ್ತು. ಅದರಂತೆ ಇತ್ತೀಚಿಗೆ ಕೊರೊನಾ ಭೀತಿಯಿಂದ ಜನರು ಆಮ್ಲಜನಕದ ಕೊರೆತೆಯಿಂದ ಸಾವನ್ನಪ್ಪುತ್ತಿದ್ದಾರೆ. ಈ ಅರಣ್ಯೀಕರಣದಿಂದ ಆಮ್ಲಜನಕ ಉತ್ಪಾದನೆ ಆಗುತ್ತದೆ. ಜೊತೆಗೆ ನಗರದ ತಾಪಮಾನ ಸಹ ಇದು ನಿಯಂತ್ರಿಸುತ್ತದೆ. ನಗರದಲ್ಲಿ ವಿನೂತನ ಪ್ರಯತ್ನಕ್ಕೆ ಮಹಾನಗರ ಪಾಲಿಕೆ ಮುಂದಾಗಿರುವುದು ಪರಿಸರ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ.