ದಾವಣಗೆರೆ : ಹೋಳಿ ಹಬ್ಬಕ್ಕೆ ನಾನಾ ರೀತಿಯ ಸ್ಪರ್ಧೆಗಳು ಏರ್ಪಡಿಸುವುದು ವಾಡಿಕೆ. ಅದರಂತೆ ದಾವಣಗೆರೆಯಲ್ಲಿ ಮಿರ್ಚಿ-ಮಂಡಕ್ಕಿ ಸ್ಪರ್ಧೆ ನಡೆದು ಮಹಿಳೆಯರು, ಪುರುಷರೆನ್ನದೇ ಭಾಗವಹಿಸಿ ತಮ್ಮ 'ತಿನ್ನುವ ಸಾಮರ್ಥ್ಯ' ಸಾಬೀತುಪಡಿಸಿದರು.
ನಗರದ ದುರ್ಗಾಂಬಿಕೆ ಜಾತ್ರೆ ಪ್ರಯುಕ್ತ ಜಿಲ್ಲಾ ಸಮಾಚಾರ ಪತ್ರಿಕೆ ಬಳಗದಿಂದ ಇಲ್ಲಿನ ರೋಟರಿ ಬಾಲಭವನದ ಆವರಣದಲ್ಲಿ ಮಿರ್ಚಿ ಮಂಡಕ್ಕಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಸಾಕಷ್ಟು ಯುವಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ನಾ ಮುಂದು ತಾ ಮುಂದು ಎಂಬಂತೆ ಮಂಡಕ್ಕಿ- ಮೆಣಸಿನಕಾಯಿ ಸೇವಿಸಿದರು.
ಆಯೋಜಕರು ನಿಗದಿ ಮಾಡಿದ ಸಮಯ ಮತ್ತು ಇಂತಿಷ್ಟು ಮಂಡಕ್ಕಿ-ಮಿರ್ಚಿ ತಿನ್ನಬೇಕು ಎಂಬ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಥಮ ಬಹುಮಾನವಾಗಿ 3 ಸಾವಿರ, ದ್ವಿತೀಯ ಬಹುಮಾನಕ್ಕೆ 2 ಸಾವಿರ ಹಾಗೂ ತೃತೀಯ ಬಹುಮಾನವಾಗಿ 1 ಸಾವಿರ ರೂ. ನಗದು ಘೋಷಿಸಲಾಗಿತ್ತು.
ಮಂಡಕ್ಕಿ-ಮಿರ್ಚಿ ತಿನ್ನುವಾಗ ಗಂಟಲು ಕಟ್ಟಿಕೊಂಡು ಜನರು ನೀರು ಕುಡಿದು ಮತ್ತೆ ಸ್ಪರ್ಧೆಗೆ ಅಣಿಯಾಗುವುದು, ಅಲ್ಲದೇ, ಸುತ್ತಲಿನ ಜನರು ಚಪ್ಪಾಳೆ ತಟ್ಟಿ ಸ್ಪರ್ಧಾಳುಗಳನ್ನು ಹುರಿದುಂಬಿಸುವುದು ಸ್ಪರ್ಧೆಯ ಮಜಾ ಹೆಚ್ಚಿಸಿತ್ತು.
ಓದಿ: ಪೆಟ್ರೋಲ್ ಬೆಲೆ ಏರಿಕೆ ಬಿಸಿ.. ಕೆಲಸಕ್ಕೆ ಕುದುರೆ ಏರಿ ಹೊರಟ ಹಮ್ಮೀರ