ದಾವಣಗೆರೆ : ಮಾಡೋಕೆ ಕೆಲಸ ಇಲ್ಲದವರು ಅದೇನೋ ಮಾಡಿದ್ರಂತೆ. ಹಾಗೇ ಮಾಡೋಕೆ ಇಬ್ಬರಿಗೂ ಕೆಲಸ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಪಾರ್ಟಿ ಜಗಳ, ಡಿ.ಕೆ ಶಿವಕುಮಾರ್ ಯಾವಾಗಲೂ ಒಂದು ಚೆಕ್ಪೋಸ್ಟ್ ಹಾಕೇ ಇರ್ತಾರೆ.
ಸಿದ್ದರಾಮಯ್ಯನ ಟ್ರೈನ್ ಬಂದ ತಕ್ಷಣ ಡಿಕೆಶಿ ಗೇಟ್ ಹಾಕಿ ಬಿಡ್ತಾರೆ. ಆಗ ಸಿದ್ದರಾಮಯ್ಯ ಒಂದನೇ ತರಗತಿಯಿಂದ ಓದಿಕೊಂಡು ಬರಬೇಕು. ಮತ್ತೆ ಇಲ್ಲಿಗೆ ಬಂದ್ರೆ ಮತ್ತೆ ಚೆಕ್ಪೋಸ್ಟ್ ಹಾಕ್ತಾರೆ. ಇದು ಕಾಂಗ್ರೆಸ್ನಲ್ಲಿ ನಿರಂತರವಾದ ಪ್ರಕ್ರಿಯೆಯಾಗಿದೆ ಎಂದು ವ್ಯಂಗ್ಯವಾಡಿದರು.
ಗುಲಾಬ್ ನಭಿ ಆಜಾದ್ ಆ್ಯಂಡ್ ಟೀಮ್ ಬುದ್ಧಿವಂತರು : ಗುಲಾಬ್ ನಭಿ ಆಜಾದ್ ಆ್ಯಂಡ್ ಟೀಮ್ ಬುದ್ಧಿವಂತರ ಟೀಂ ಆಗಿದೆ. ಅಲ್ಲಿ ಕೂಡ ಕಾಂಗ್ರೆಸ್ ಅನ್ನು ಉದ್ದಾರ ಆಗಲು ಬಿಡ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಉದ್ದಾರ ಆಗೋಕೆ ಇವ್ರು ಬಿಡ್ತಿಲ್ಲ. ಇವರಿಬ್ಬರ ಜಗಳದಲ್ಲಿ ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಬಡವಾಗುತ್ತಿದೆ ಎಂದು ಲೇವಡಿ ಮಾಡಿದರು.
ಅಲ್ಪಸಂಖ್ಯಾತರ ಮತಕ್ಕಾಗಿ ಈ ಇಬ್ಬರು ಆರ್ಎಸ್ಎಸ್ ಬೈಯ್ಯತ್ತಿದ್ದಾರೆ : ಅಲ್ಪಸಂಖ್ಯಾತರ ಮತಕ್ಕಾಗಿ ವಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಹೆಚ್.ಡಿ ಕುಮಾರಸ್ವಾಮಿ ಆರ್ಎಸ್ಎಸ್ ಅನ್ನು ಬೈಯ್ಯತ್ತಿದ್ದಾರೆ. ಆರ್ಎಸ್ಎಸ್ ಒಂದು ಸ್ವಯಂ ಸೇವಾ ಸಂಸ್ಥೆ. ಹೊಗಳಿಕೆ, ತೆಗಳಿಕೆ ಸಂಘಕ್ಕೆ ಬೇಕಾಗಿಲ್ಲ.
ಎರಡು ಪಕ್ಷಗಳಲ್ಲಿ ಕತ್ತೆ ಸತ್ತು ಬಿದ್ದಿದೆ. ಇಲ್ಲಿ ನೊಣ ಬಿದ್ದಿದೆ ಎಂದು ನೋಡುತ್ತಿದ್ದಾರೆ. ಮುಂದೆ ಭವಿಷ್ಯ ಇರುವುದು ಬಿಜೆಪಿಗೆ ಮಾತ್ರ. ಕಾಂಗ್ರೆಸ್-ಜೆಡಿಎಸ್ ಹೊರಟು ಹೋಗುತ್ತವೆ ಎಂದು ಸಚಿವ ಆರ್.ಅಶೋಕ್ ಭವಿಷ್ಯ ನುಡಿದರು.
ಇಬ್ರಾಹಿಂ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ : ಇಬ್ರಾಹಿಂ ಅವರು ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಜೆಡಿಎಸ್, ಕಾಂಗ್ರೆಸ್ ಎಲ್ಲಾ ಪಕ್ಷ ಸುತ್ತು ಹಾಕಿಕೊಂಡು ಬಂದಿದ್ದಾರೆ. ಅಲ್ಲಿಯ ಚಾಡಿಯನ್ನು ಇಲ್ಲಿ ಹೇಳ್ತಾ ಇದ್ದಾರೆ ಎಂದು ಟಾಂಗ್ ನೀಡಿದರು.
ಬೊಮ್ಮಾಯಿಯವರಿಗೆ ನನ್ನ ಪೂರ್ತಿ ಬೆಂಬಲ ಇದೆ : ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರು ಸ್ಪಷ್ಟವಾಗಿ ಹೇಳಿದ್ದಾರೆ. ದಾವಣಗೆರೆಯಲ್ಲಿ ಕೂಡ ಹೇಳಿದ್ದಾರೆ. ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತದೆ ಎಂದಿದ್ದಾರೆ. ಬೊಮ್ಮಾಯಿಯವರಿಗೆ ನನ್ನ ಪೂರ್ತಿ ಬೆಂಬಲ ಇದೆ. ಒಳ್ಳೆಯ ಕುಟುಂಬದಿಂದ ಬಂದಿದ್ದಾರೆ. ಒಳ್ಳೆಯ ಆಡಳಿತ ಕೂಡ ಮಾಡುತ್ತಿದ್ದಾರೆ ಎಂದರು.