ದಾವಣಗೆರೆ: ಗಂಡನಿಂದ ದೂರವಾಗಿದ್ದ ದೂರವಾಗಿ ತನ್ನ ಸಹೋದರಿಯ ಆಸರೆಯಲ್ಲಿದ್ದ ಬುದ್ದಿಮಾಂದ್ಯ ಮಹಿಳೆಗೆ ಕೂಲ್ಡ್ರಿಂಕ್ಸ್ ಎಂದು ಮದ್ಯ ಕುಡಿಸಿ, ಇಬ್ಬರು ದುರುಳರು ಅತ್ಯಾಚಾರ ಎಸಗಿರುವ ಘಟನೆ ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆದಿದ್ದು, ಕೃತ್ಯದಲ್ಲಿ ಪಾಲ್ಗೊಂಡ ಒಬ್ಬನನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದು ಆತನಿಗಾಗಿ ಬಲೆ ಬೀಸಲಾಗಿದೆ.
ದಾವಣಗೆರೆ ತಾಲೂಕಿನ ಮ್ಯಾಸರಹಳ್ಳಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಈ ಅಮಾನವೀಯ ಘಟನೆ ನಡೆದಿದೆ. ಬುದ್ಧಿಮಾಂದ್ಯ ವಿವಾಹಿತ ಮಹಿಳೆಯನ್ನು ಇಬ್ಬರು ದುರುಳರು ಪುಸಲಾಯಿಸಿ, ಕೂಲ್ ಡ್ರಿಂಕ್ಸ್ ಹೆಸರಲ್ಲಿ ಮದ್ಯ ಸೇವನೆ ಮಾಡಿಸಿ ಅತ್ಯಾಚಾರ ಮಾಡಿದ್ದಾರೆ. ಬುದ್ಧಿಮಾಂದ್ಯ ಮಹಿಳೆ ಎಂಬ ಕನಿಕರವೂ ಇಲ್ಲದೇ ದುರಳರು ತಮ್ಮ ಕಾಮತೃಷೆಯನ್ನು ತೀರಿಸಿಕೊಂಡಿದ್ದಾರೆ.
ಮ್ಯಾಸರಹಳ್ಳಿ ಗ್ರಾಮದ ಪ್ರಭು ಹಾಗೂ ಕುಂದವಾಡ ಗ್ರಾಮದ ಕಿರಣ್ ಇಬ್ಬರೂ ಸೇರಿ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಪ್ರಭು ಮಹಿಳೆಯನ್ನು ಪುಸಲಾಯಿಸಿ ತನ್ನ ಜಮೀನಿಗೆ ಕರೆದುಕೊಂಡು ಬಂದು ತಂಪು ಪಾನಿಯ ಎಂದು ನಂಬಿಸಿ ಅದರಲ್ಲಿ ಮದ್ಯವನ್ನು ಬೆರೆಸಿ ಬುದ್ಧಿಮಾಂದ್ಯ ಮಹಿಳೆಗೆ ಕುಡಿಸಿದ್ದಾರೆ. ನಂತರ ಈ ಕಾಮಪಿಶಾಚಿಗಳಿಬ್ಬರು ಮಹಿಳೆಯ ಮೇಲೆರಗಿ ಅತ್ಯಾಚಾರ ಎಸಗಿದ್ದಾರೆಂದು ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ:
ಈ ಬುದ್ಧಿಮಾಂದ್ಯ ಮಹಿಳೆಗೆ ಒಂದು ಹೆಣ್ಣು ಮಗುವಿದೆ. ಈ ಮಹಿಳೆಯ ಪತಿ ದೂರವಾದ ನಂತರ, ಅಲ್ಲಿಲ್ಲಿ ಅಡ್ಡಾಡಿ ಜೀವಿಸುತ್ತಿದ್ದ ಇವಳನ್ನು ಸ್ವಂತ ಅಕ್ಕನೇ ತಮ್ಮ ಮನೆಗೆ ಕರೆ ತಂದು ಪೋಷಣೆ ಮಾಡುತ್ತಿದ್ದರು. ಯಾರನ್ನಾದ್ರೂ ಸುಲಭವಾಗಿ ನಂಬುವ ಸ್ವಭಾವವಿದ್ದದ್ದೇ ಬುದ್ಧಿಮಾಂದ್ಯೆಗೆ ಕಂಟಕವಾಗಿತ್ತು. ಎರಡು ದಿನದ ಹಿಂದೆ 3 ಗಂಟೆಯಾದ್ರು ಮಹಿಳೆ ಮನೆಗೆ ಬಂದಿರಲಿಲ್ಲ. ಮನೆಯವರೆಲ್ಲಾ ಮಹಿಳೆಯನ್ನು ಹುಡುಕತೊಡಗಿದ್ರು. ಯಾರೋ ನೋಡಿದವರು ಪ್ರಭು ಹಾಗೂ ಮತ್ತೊಬ್ಬನ ಜತೆ ಹೊಲದ ಕಡೆಗೆ ಹೋದ್ರು ಎಂಬ ಮಾಹಿತಿ ನೀಡಿದ್ದಾರೆ.
ಆ ಮಹಿಳೆಯ ಅಕ್ಕನ ಗಂಡ ಕುಬೇಂದ್ರ ಹೊಲದ ಕಡೆ ಹುಡುಕಲು ಹೋದಾಗ, ಅಲ್ಲಿ ಪ್ರಭು ಕಿರಣ್ ಕುಕೃತ್ಯದಲ್ಲಿ ತೊಡಗಿದ್ದು ಕಂಡು ಬಂದಿದೆ. ಕುಬೇಂದ್ರಪ್ಪನನ್ನು ನೋಡುತ್ತಲೇ ಆ ಇಬ್ಬರು ದುರುಳರು ಪರಾರಿಯಾಗಿದ್ದಾರೆ. ಜಮೀನಿನಲ್ಲಿ ಅಸ್ವಸ್ಥಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ರು. ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಮಹಿಳೆ, ಪೊಲೀಸರ ಎದುರು ನಡೆದ ಘಟನೆಯನ್ನು ವಿವರಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಗ್ರಾಮಾಂತರ ಪೊಲೀಸರು ಕಿರಣ್ನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪ್ರಭುಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: ಚಾಮರಾಜನಗರ : 5 ವರ್ಷದ ಬಾಲಕಿ ಮೇಲೆ ಮಲ ತಂದೆಯಿಂದ ಅತ್ಯಾಚಾರ