ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ ಕೆಂಗಾಪುರ ಗ್ರಾಮಕ್ಕೆ ಕೊನೆಗೂ ಸರ್ಕಾರಿ ಬಸ್ ಬಂದಿದೆ. ಇದು ಅಲ್ಲಿನ ಜನರ ಹಲವು ವರ್ಷಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಗ್ರಾಮಕ್ಕೆ ಬಂದ ಬಸ್ಗೆ ಪೂಜೆ ಮಾಡಿ ಹರ್ಷ ವ್ಯಕ್ತಪಡಿಸಲಾಗಿದೆ.
ಚನ್ನಗಿರಿ ತಾಲೂಕು ಕಬ್ಬಳ, ಹರನಹಳ್ಳಿ, ಕೆಂಗಾಪುರ, ಕಣಿವೆ ಬಿಳಚಿ ಮತ್ತು ಬಸವಪಟ್ಟಣ, ದಾಗಿನಕಟ್ಟೆಯ ಮಾರ್ಗವಾಗಿ ಕೆಎಸ್ಆರ್ಟಿಸಿ ಬಸ್ ಸಂಚಾರವೇ ಇರಲಿಲ್ಲ. ಇದರ ವಿರುದ್ಧ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿ ಪ್ರತಿಭಟಿಸಿದರೂ ಪ್ರಯೋಜನವಾಗಿರಲಿಲ್ಲ.
ಬಸ್ ಇಲ್ಲದೇ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದರು. ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತೆರಳಬೇಕಾದರೆ ನಡೆದುಕೊಂಡೋ ಅಥವಾ ಖಾಸಗಿ ವಾಹನಗಳನ್ನೇ ನೆಚ್ಚಿಕೊಳ್ಳಬೇಕಾಗಿತ್ತು. ಇದೀಗ ಆ ಸಮಸ್ಯೆ ದೂರವಾಗಿದೆ. ಈ ಗ್ರಾಮಗಳ ಮಾರ್ಗವಾಗಿ ಸಾರಿಗೆ ಬಸ್ ಸಂಚಾರ ಶುರುವಾಗಿದೆ. ಇದು ಗ್ರಾಮಸ್ಥರ ಹರ್ಷಕ್ಕೆ ಕಾರಣವಾಗಿದೆ.
ಹರನಹಳ್ಳಿ ಕೆಂಗಪುರ ಗ್ರಾಮಕ್ಕೆ ಬರುವ ಕೆಎಸ್ಆರ್ಟಿಸಿ ಬಸ್, ಈ ಗ್ರಾಮಗಳ ಮಾರ್ಗವಾಗಿ ಹೊನ್ನಾಳ್ಳಿಗೆ ಸಂಚರಿಸುತ್ತದೆ. ಹರನಹಳ್ಳಿ ಕೆಂಗಾಪುರಕ್ಕೆ ಆಗಮಿಸಿದ ಬಸ್ಗೆ ರಾಮಲಿಂಗೇಶ್ವರ ಮಠದ ಸ್ವಾಮೀಜಿಗಳು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪೂಜೆ ಮಾಡಿ ಚಾಲನೆ ನೀಡಿದರು. ಇದೇ ವೇಳೇ ಸಾರಿಗೆ ಇಲಾಖೆಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.
ಓದಿ: ಸಿಲಿಕಾನ್ ಸಿಟಿಯಲ್ಲಿ ಮೊದಲ ಬಾರಿಗೆ ಏಷ್ಯಾ ಒಷೇನಿಯಾ ಅಲ್ಟ್ರಾ ರನ್ನಿಂಗ್ ಚಾಂಪಿಯನ್ಶಿಪ್