ದಾವಣಗೆರೆ: ಕೋವಿಡ್ ವಿಚಾರದಲ್ಲಿ ರಾಜ್ಯ ಸರ್ಕಾರ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ನಡೆಸಿಲ್ಲ. 'ಕುಣಿಯಲಾರದವಳು ನೆಲ ಡೊಂಕು ಎಂಬಂತೆ' ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಅವ್ಯವಹಾರ ಮಾಡಿದ ದಾಖಲೆ ಒದಗಿಸಿದರೆ ನಾವು ಶ್ವೇತಪತ್ರ ಹೊರಡಿಸಲು ಸಿದ್ಧರಿದ್ದೇವೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರದರ್ಶಕವಾಗಿಯೇ ನಾವು ಕೆಲಸ ಮಾಡಿದ್ದೇವೆ. ಒಂದೊಂದು ಪೈಸೆಯ ಲೆಕ್ಕವನ್ನು ನಾವು ಸಿದ್ದರಾಮಯ್ಯರಿಗೆ ನೀಡುತ್ತೇವೆ. ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಈ ಹೊತ್ತಿನಲ್ಲಿ ಪ್ರತಿಪಕ್ಷಗಳು ಸಹಕಾರ ನೀಡುವುದನ್ನು ಬಿಟ್ಟು ಆಧಾರ ರಹಿತ ಆರೋಪ ಮಾಡುತ್ತಿವೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕೊರೊನಾ ಸಂಕಷ್ಟದ ಸಮಯದಲ್ಲಿ ಯಾರಿಗೂ ಸಹಾಯ ಮಾಡಿಲ್ಲ ಎಂಬ ಗಂಭೀರ ಆರೋಪ ಮಾಡಿದರು.
ಸಚಿವರಲ್ಲಿ ಒಮ್ಮತ ಇಲ್ಲ ಎಂಬುದನ್ನು ನಿರಾಕರಿಸಿದ ಅವರು, ನಾವೆಲ್ಲಾ ಒಟ್ಟಾಗಿದ್ದೇವೆ. ವಿನಾ ಕಾರಣ ಆರೋಪ ಮಾಡುವುದನ್ನು ಬಿಡಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಮಾರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ವಿಶ್ವವೇ ಕೊರೊನಾದಿಂದ ನಲುಗುತ್ತಿದೆ. ಇಂತಹ ಹೊತ್ತಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಆರೋಗ್ಯ ಇಲಾಖೆಯಲ್ಲಿ ಕೊರೊನಾ ಸಂಬಂಧ ಸಣ್ಣಪುಟ್ಟ ಲೋಪ-ದೋಷವಾಗಿರುವುದು ನಿಜ. ಈ ಬಗ್ಗೆ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಕೇಂದ್ರ ಸರ್ಕಾರ ಸಹ ಕೊರೊನಾ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ ಎಂದರು.