ದಾವಣಗೆರೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ತಗುಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿದೆ. ನೀವೇ ಜಾಗೃತೆ ವಹಿಸದಿದ್ದರೆ, ಜನರನ್ನು ಹೇಗೆ ರಕ್ಷಣೆ ಮಾಡುತ್ತೀರಾ ಎಂಬ ಪ್ರಶ್ನೆ ಕೇಳುವ ಸ್ಥಿತಿ ಬಂದಿದೆ ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ತಡೆಗಟ್ಟುವ ಸಲುವಾಗಿ ರಾಜ್ಯಸರ್ಕಾರ ನಾಲ್ಕು ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿದೆ. ಆದರೆ, ಜನರ ಆರೋಗ್ಯ ರಕ್ಷಣೆ ಮಾಡುವುದಕ್ಕಿಂತ ಅವ್ಯವಹಾರ, ಲಂಚ ಪಡೆಯುವುದರಲ್ಲಿ ಸರ್ಕಾರ ಹೆಚ್ಚು ಆಸಕ್ತಿ ವಹಿಸಿದೆ. ಈ ವಿಚಾರ ಬಯಲಿಗೆಳೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ನೊಟೀಸ್ ನೀಡಲಾಗಿದೆ. ಇದಕ್ಕೆ ಉತ್ತರ ನೀಡಲು ನಾವು ಸಮರ್ಥರಿದ್ದೇವೆ ಎಂದು ತಿಳಿಸಿದರು.
ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿ ಅವರಿಂದ ನ್ಯಾಯಾಂಗ ತನಿಖೆ ನಡೆಸಿ ಎಂಬುದು ನಮ್ಮ ಬೇಡಿಕೆ. ಹಿಂದಿನ ಸರ್ಕಾರದ ಲೋಪದೋಷ ಇದ್ದರೂ ಸತ್ಯಾಂಶ ಹೊರಬರಲಿ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತನಿಖೆ ಆಗದಿದ್ದರೆ, ಹೋರಾಟ ನಡೆಸಬೇಕಾಗುತ್ತದೆ. ಜನರು ಕೊರೊನಾ ಬಂದ ಬಳಿಕ ತುಂಬಾ ಕಷ್ಟದಲ್ಲಿದ್ದು, ಬದುಕುವುದು ಹೇಗೆ ಎಂಬ ಬಗ್ಗೆ ಚಿಂತೆಯಲ್ಲಿದ್ದಾರೆ. ಈ ವೇಳೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ಭ್ರಷ್ಟಾಚಾರ ನಡೆಸಿರುವುದನ್ನು ನೋಡಿದರೆ ಜನಪರ ಕಾಳಜಿ ಏನು ಎಂಬುದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು.