ದಾವಣಗೆರೆ: ಜಿಲ್ಲೆಯ ಜಗಳೂರು ಪಟ್ಟಣದ ಅಲ್ಪ ಸಂಖ್ಯಾತರ ಮೊರಾರ್ಜಿ ಬಾಲಕಿಯರ ವಸತಿ ಶಾಲೆಯ 95 ವಿದ್ಯಾರ್ಥಿನಿಯರು ಇಂದು ಬೆಳಿಗ್ಗೆ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷ ಆಹಾರ ಸೇವನೆಯೇ ಕಾರಣ ಎಂದು ಹೇಳಲಾಗುತ್ತಿದೆ.
ಕಳೆದ ರಾತ್ರಿ ಅನ್ನ ಸಾಂಬಾರ, ಬೆಳಗ್ಗೆ ಚಿತ್ರಾನ್ನ ಸೇವಿಸಿದ ಬಳಿಕ ವಿದ್ಯಾರ್ಥಿನಿಯರು ವಾಂತಿ, ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. 50 ಮಕ್ಕಳಿಗೆ ಜಗಳೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ ಮಕ್ಕಳಿಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಡಾ.ನಾಗರಾಜ್, ಮಕ್ಕಳ ತಜ್ಞ ಜಯಕುಮಾರ್, ತಹಶೀಲ್ದಾರ್ ಶಶಿಧರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಮಕ್ಕಳು ಸೇವಿಸಿದ ಆಹಾರವನ್ನು ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿದ್ದು, ಒಟ್ಟು 107 ವಿದ್ಯಾರ್ಥಿಗಳಲ್ಲಿ 95 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಫುಡ್ ಪಾಯಿಸನ್ ಆಗಿರುವ ಬಗ್ಗೆ ವರದಿ ಬಂದ ಬಳಿಕ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
(ಇದನ್ನೂ ಓದಿ: ಶಿಕ್ಷಕನನ್ನು ಕಳುಹಿಸಿಕೊಡಲಾಗದೇ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು.. ಗುರುವಿನ ಕಣ್ಣಲ್ಲೂ ನೀರು)