ದಾವಣಗೆರೆ: ದೊಡ್ಡಬಾತಿ ಗ್ರಾಮದ ದರ್ಗಾದ ಹುಂಡಿಯೊಂದಕ್ಕೆ ಬೆಂಕಿ ಬಿದ್ದ ಹಿನ್ನೆಲೆ ಲಕ್ಷಾಂತರ ರೂ. ಸುಟ್ಟು ಕರಕಲಾದ ಘಟನೆ ನಡೆದಿದೆ.
ದಾವಣಗೆರೆಯಲ್ಲಿ ಒಟ್ಟು 16 ದರ್ಗಾಗಳು ವಕ್ಫ್ ಬೋರ್ಡ್ ವ್ಯಾಪ್ತಿಯಲ್ಲಿ ಬರುತ್ತಿದ್ದು, ಅದರಲ್ಲಿ ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದ ಹಜರತ್ ಚಮನ್ ಷಾ ವಲಿ ದರ್ಗಾ ಅಷ್ಟೇ ಸಂಪತ್ದ್ಭರಿತ ದರ್ಗಾಗಳ ಸಾಲಿನಲ್ಲಿ ಬರುತ್ತದೆ. ಚಮನ್ ಷಾ ವಲಿ ದರ್ಗಾದಲ್ಲಿ ಇರಿಸಲಾಗಿದ್ದ ಹುಂಡಿಯನ್ನು ಕಳೆದ ನಾಲ್ಕು ವರ್ಷಗಳಿಂದ ಕೆಲ ಕಾರಣಾಂತರಗಳಿಂದ ತೆಗೆದಿರಲಿಲ್ಲ. ಅದ್ರೆ ಅದೇ ಹುಂಡಿಗೆ ಬೆಂಕಿ ಬಿದ್ದಿದ್ದರಿಂದ ಲಕ್ಷಾಂತರ ರೂ. ಸುಟ್ಟು ಕರಕಲಾಗಿದೆ.
ಬೆಂಕಿಯ ಕೆನ್ನಾಲಿಗೆಗೆ 2000, 500, 200,100 ರೂ. ಮುಖ ಬೆಲೆಯ ನೋಟುಗಳು ಸುಟ್ಟು ಕರಕಲಾಗಿವೆ. ಬೆಂಕಿ ತಗುಲಿರುವುದನ್ನು ಗಮನಿಸಿದ ದರ್ಗಾದ ಮುಜಾವರ್ವೊಬ್ಬರು ( ದರ್ಗಾವನ್ನು ಪೋಷಣೆ ಮಾಡುವರು) ಸಂಬಂಧಪಟ್ಟ ವಕ್ಫ್ ಇಲಾಖೆಗೆ ಮಾಹಿತಿ ನೀಡಿ, ಬೆಂಕಿ ನಂದಿಸಿದ್ದರಿಂದ ಶೇ 90% ರಷ್ಟು ಹಣ ಉಳಿದಿದೆ.
ಹುಂಡಿಗೆ ಬೆಂಕಿ ತಗುಲಿದ್ದಾದರೂ ಹೇಗೆ?
ಪ್ರತಿ ದಿನದಂತೆ ದರ್ಗಾದ ಬಾಗಿಲು ತೆಗೆಯಲಾಗಿದೆ. ದರ್ಗಾದ ದರ್ಶನಕ್ಕಾಗಮಿಸಿದ ಬಾಲಕನೋರ್ವ ದರ್ಗಾದ ಮುಂದೆ ಬೆಂಕಿ ಕಡ್ಡಿಯ ಸಹಾಯದಿಂದ ಉದ್ದಿನ ಕಡ್ಡಿ(ಅಗರಬತ್ತಿ) ಹಚ್ಚಲು ಹೋಗಿದ್ದಾನೆ. ಉದ್ದಿನ ಕಡ್ಡಿ ಹಚ್ಚಿದ ಬಳಿಕ ಬೆಂಕಿ ಕಡ್ಡಿಯನ್ನು ಹೊರಗೆ ಎಸೆಯದೆ ಹಣದ ಹುಂಡಿಯಲ್ಲಿ ಹಾಕಿದ್ದಾನೆ. ತಕ್ಷಣವೇ ಹಣಕ್ಕೆ ಬೆಂಕಿ ತಗುಲಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಕ್ಫ್ ಅಧಿಕಾರಿಗಳು ನಾಲ್ಕು ವರ್ಷಗಳಿಂದ ಹುಂಡಿಯನ್ನು ತೆಗೆಯದ ಹಿನ್ನೆಲೆ ಕೋಟಿಗಟ್ಟಲೇ ಹಣ ಶೇಖರಣೆಯಾಗಿತ್ತು. ಇದೀಗ ಬೆಂಕಿ ತಗುಲಿದ್ದರಿಂದ ಹುಂಡಿಯನ್ನು ಒಡೆದಿದ್ದು, ಸಾಕಷ್ಟು ಹಣ ಇರುವುದು ತಿಳಿದುಬಂದಿದೆ. ಒಂದೆರಡು ಲಕ್ಷ ರೂ. ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿದೆ ಎಂದು ಸ್ಥಳೀಯರು ಹಾಗೂ ದರ್ಗಾದ ಕಮಿಟಿಯವರು ತಿಳಿಸಿದ್ದಾರೆ.