ಹಾವೇರಿ/ದಾವಣಗೆರೆ: ಶೆಲ್ ದಾಳಿಗೆ ಉಕ್ರೇನ್ ನಲ್ಲಿ ಬಲಿಯಾದ ವೈದ್ಯಕೀಯ ವಿದ್ಯಾರ್ಥಿ ನವೀನ್‌ಗೆ ಅವರ ಕುಟುಂಬ ಕಣ್ಣೀರಿನ ಅಂತಿಮ ವಿದಾಯ ಹೇಳಿದೆ. ಸಹೋದರ ಹರ್ಷ ಅವರು ತನ್ನ ತಮ್ಮನ ಮೃತದೇಹಕ್ಕೆ ಅಪ್ಪುಗೆ ಮಾಡಿ ಅಧಿಕೃತವಾಗಿ ಆಸ್ಪತ್ರೆಯ ನಿಬಂಧನೆಗಳಿಗೆ ಸಹಿ ಹಾಕುವ ಮೂಲಕ ನವೀನ್ ಮೃತದೇಹವನ್ನು ಆಸ್ಪತ್ರೆಗೆ ಹಸ್ತಾಂತರಿಸಿದರು.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಿಂದ ನವೀನ್ ಮೃತದೇಹ ಹೊತ್ತ ಆ್ಯಂಬುಲೆನ್ಸ್ ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ಆಗಮಿಸಿತು. ಈ ವೇಳೆ ಮೃತದೇಹ ಹಸ್ತಾಂತರ ಮಾಡುವ ಮುನ್ನ ಕೊನೆಯದಾಗಿ ತಾಯಿ ವಿಜಯಲಕ್ಷ್ಮಿ ಅವರು ತನ್ನ ನೆಚ್ಚಿನ ಕಂದನಿಗೆ ವಿಭೂತಿ ಇಟ್ಟು ಹಾರ ಹಾಕಿ ಪೂಜೆ ನೆರವೇರಿಸಿದರು. ಬಳಿಕ ಮಗನ ಮೃತದೇಹದ ಮುಖದ ಭಾಗದಲ್ಲಿ ತನ್ನ ತಲೆ ಇಟ್ಟು ತಾಯಿ ಕಣ್ಣೀರಿಟ್ಟ ದೃಶ್ಯ ಕಲ್ಲು ಹೃದಯವರನ್ನು ಸಹ ಕರಗಿಸುವಂತಿತ್ತು. ಬಳಿಕ ಮಗನಿಗೆ ಲಟಿಕೆ ತೆಗೆದು, ಕೈ ಮುಗಿದು ಅಂತಿಮ ವಿದಾಯ ಹೇಳಿದ ಬೆನ್ನಲ್ಲೇ ತಾಯಿಯಿಂದ ಕರುಳ ಬಳ್ಳಿಯ ಕೊಂಡಿ ಕಳಚಿತು.
ಆಸ್ಪತ್ರೆಯ ನಿಬಂಧನೆಗಳಿಗೆ ಸಹಿ ಹಾಕಿ ತಮ್ಮ ಕುಟುಂಬದ ಸದಸ್ಯನನ್ನು ಕಳುಹಿಸಿಕೊಟ್ಟರು. ನವೀನ್ ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರಿಂದ ಅವನ ಮೃತದೇಹದಿಂದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕಲಿಯಲು ಅನುಕೂಲ ಆಗಲೆಂದು ನವೀನ್ ಮೃತದೇಹವನ್ನು ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ದಾನ ಮಾಡಿದ್ರು.
ಅಂಗಾಂಗ ರಚನ ಶಾಸ್ತ್ರ ವಿಭಾಗದ ಸಿಬ್ಬಂದಿ ಕೂಡ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿ ನವೀನ್ ಮೃತದೇಹವನ್ನು ಸ್ವೀಕರಿಸಿದರು. ಒಟ್ಟಾರೆ ಮೃತ ನವೀನ್ ಪೋಷಕರು ತಮ್ಮ ಮಗನಂತೆ ಇತರೆ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಕಲಿಯುತ್ತಿದ್ದು, ಅವರ ಕಲಿಕೆಗೆ ನೆರವಾಗಲಿ ಎಂದು ಮೃತದೇಹ ದಾನ ಮಾಡಿ ಇತರರಿಗೆ ಮಾದರಿಯಾಗಿರುವುದು ಶ್ಲಾಘನೀಯ.
ಇದನ್ನೂ ಓದಿ: ಉಕ್ರೇನ್ನಿಂದ ನವೀನ್ ಮೃತದೇಹ ತಾಯ್ನಾಡಿಗೆ... ಮೋದಿಗೆ ಧನ್ಯವಾದ ಸಲ್ಲಿಸಿದ ಸಿಎಂ ಬೊಮ್ಮಾಯಿ