ದಾವಣಗೆರೆ: ಬಿಜೆಪಿಗೆ ವೋಟ್ ಹಾಕದವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ವಕ್ತಾರ ಸಿ ಟಿ ರವಿ ಯುಟರ್ನ್ ತೆಗೆದುಕೊಂಡಿದ್ದಾರೆ. ಅದು ನಾನು ಹೇಳಿದ ಮಾತಲ್ಲ, ನಾನು ಕೇಳಿದ ಪ್ರಶ್ನೆಗೆ ಜನರು ನೀಡಿದ ಪ್ರತಿಕ್ರಿಯೆ. ಅದನ್ನೆ ನಾನು ಪುನರುಚ್ಛಾರ ಮಾಡಿದ್ದೆ ಅಷ್ಟೇ ಎಂದು ಸಮರ್ಥಿಸಿಕೊಂಡರು.
ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ್ ಪರ ಜಾಥ ನಡೆಸಿ ಬಳಿಕ ಮಾತನಾಡಿದ ಅವರು, ಅವಾಚ್ಯ ಪದ ಬಳಸಿಲ್ಲ, ಜನರು ಹೇಳಿದ್ದನ್ನು ಹೇಳಿದ್ದೇನೆ ಅಷ್ಟೇ. ಕುಮಾರಸ್ವಾಮಿ ಮಹಿಳೆಗೆ ಎಲ್ಲಿ ಮಲಗಿದ್ದಿ ಅಂತಾ ಕೇಳಿದ್ದರು. ನಾನು ಆ ರೀತಿ ಹೇಳಿದ್ದೀನಾ, ಕುಂಬಳಕಾಯಿ ಕಳ್ಳ ಎಂದರೆ ಕಾಂಗ್ರೆಸ್ ಹೆಗಲು ಮುಟ್ಟಿಕೊಳ್ಳುವುದೇಕೆ ಎಂದು ರವಿ ಪ್ರಶ್ನಿಸಿದರು.
ಇನ್ನು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ನಂತರ ನೇರವಾಗಿ ಪಕ್ಷದ ವಾರಸುದಾರಿಕೆ ಅವರ ಕುಟುಂಬಕ್ಕೆ ಹೋಗುವುದಿಲ್ಲ. ಅದು ಎಂದಿಗೂ ಸಾಧ್ಯವಿಲ್ಲ. ಈ ಸಂಪ್ರದಾಯ ಪಕ್ಷದಲ್ಲಿ ಇಲ್ಲ. ಪಕ್ಷದ ನಾಯಕರ ಮಕ್ಕಳು ಸಂಸದರು, ಶಾಸಕರು ಆಗುವುದು ಬೇರೆ ವಿಚಾರ. ಆದರೆ, ರಾಜಕೀಯ ಅಧಿಕಾರ ಹಸ್ತಾಂತರ ಮಾಡಲು ಆಗದು. ಇದು ನಮ್ಮ ಪಕ್ಷದಲ್ಲಿ ಆಗುವಂಥಹದ್ದಲ್ಲ. ಕಾಂಗ್ರೆಸ್, ಜೆಡಿಎಸ್ನಲ್ಲಿ ಆಸ್ತಿ ಹಸ್ತಾಂತರ ಮಾಡಿದಂತೆ ಪಕ್ಷ ಹಸ್ತಾಂತರಿಸುವ ಸಂಸ್ಕೃತಿ ಇದೆ. ಬಿಜೆಪಿಯಲ್ಲಿ ಜನಸಾಮಾನ್ಯರಿಂದ ಬೆಳೆದು ನಾಯಕರ ಮಕ್ಕಳು ಜನಪ್ರತಿನಿಧಿಗಳಾಗುತ್ತಾರೆ ಎಂದರು.
ಜಯಮಾಲಾ ಟೀಕೆಗೆ ಟಾಂಗ್ ಕೊಟ್ಟ ರವಿ:
ಸಚಿವೆ ಜಯಮಾಲಾ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ರವಿ, ನಾನು ಆ ಮಾತು ಹೇಳಿಲ್ಲ. ಹಾಸನದಲ್ಲಿ ಉಂಡ ಮನೆಗೆ ದ್ರೋಹ ಬಗೆದರೆ ಏನಂತೀರಾ? ಎಂಬುದಾಗಿ ಕೇಳಿದ್ದೆ. ಆಗ ಅಲ್ಲಿದ್ದ ಕೆಲವರು ಅವಾಚ್ಯ ಪದ ಬಳಸಿದ್ದರು. ನಾನು ಆ ಪದ ಬಳಸಿಲ್ಲ. ರಾಜಕೀಯವಾಗಿ ಮಾತನಾಡುವಾಗ ಹುಷಾರಾಗಿ, ಸಭ್ಯತೆಯಿಂದ ಪ್ರತಿಕ್ರಿಯಿಸುತ್ತೇನೆ. ನನ್ನ ತಾಯಿ ಸಂಸ್ಕಾರ ಕಲಿಸಿದ್ದಾರೆ. ನಾನಂತೂ ಪಕ್ಷಕ್ಕೆ ದ್ರೋಹ ಬಗೆದಿಲ್ಲ ಎಂದರು.
ಸಿಎಂ ಕುಮಾರಸ್ವಾಮಿ ರೈತ ಹೋರಾಟಗಾರ್ತಿಗೆ ಎಲ್ಲಿ ಮಲಗಿದ್ದಿ ಅಂತಾ ಕೇಳಿದ್ದ ವೇಳೆ ಜಯಮಾಲಾ ಯಾಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಆಗ ನಿಮ್ಮ ಬಾಯಿಗೆ ಲಕ್ವಾ ಹೊಡೆದಿತ್ತಾ, ಮಹಿಳಾ ಕಾಳಜಿ ಎಲ್ಲಿ ಹೋಗಿತ್ತು, ರಾಜೀನಾಮೆ ಕೊಡಬೇಕಿತ್ತು. ಅಂಬರೀಶ್ ಪತ್ನಿ ಸುಮಲತಾ ಅವರಿಗೆ ಜೆಡಿಎಸ್ನವರು ಕೊಡಬಾರದ ಕಾಟ ಕೊಟ್ಟಿದ್ದಾರೆ. ಆಗ ಮಹಿಳಾ ಪರ ಧೋರಣೆ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಅಲ್ಲದೆ, ಸಂಸ್ಕಾರವನ್ನು ಮೊದಲು ನಿಮ್ಮ ಮುಖ್ಯಮಂತ್ರಿಗೆ ಕಲಿಸಿ ಎಂದು ಸಚಿವೆ ಜಯಮಾಲಾಗೆ ರವಿ ತಿರುಗೇಟು ನೀಡಿದರು.
ಟೈಂ ಬಾಂಬ್ ಫಿಕ್ಸ್:
ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ. ಮೇ 23 ರವರೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ತಾಳ್ಮೆಯಿಂದ ಇರುವಂತೆ ಹೇಳಿದ್ದಾರೆ. ನಂತರ ನಿಮ್ಮ ಇಷ್ಟ ಎಂದಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಪತನಗೊಳ್ಳಲಿದೆ ಎಂದು ಸಿ ಟಿ ರವಿ ಭವಿಷ್ಯ ನುಡಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆರ್. ಅಶೋಕ್ ಸಮರ್ಥರಿದ್ದಾರೆ. ಪಕ್ಷದ ಹೈಕಮಾಂಡ್ ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಕೆಲಸ ಮಾಡುತ್ತೇವೆ. ಆ ಸಮಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಡಿಯೂರಪ್ಪ ಪಕ್ಷದಲ್ಲಿ ಈಗ ರಾಜ್ಯಾಧ್ಯಕ್ಷರಾಗಿದ್ದು, ಚರ್ಚೆ ಅಪ್ರಸ್ತುತ. ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿಗೆ ಬರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಬಂದ್ರೆ ಸ್ವಾಗತಿಸುತ್ತೇವೆ ಎಂದು ರವಿ ಸ್ಪಷ್ಟಪಡಿಸಿದರು.