ದಾವಣಗೆರೆ: ಮೂಲಸೌಕರ್ಯ ವೀಕ್ಷಿಸಲು ಆಗಮಿಸಿದ್ದ ಪಾಲಿಕೆ ಮೇಯರ್ ಮುಂದೆಯೇ ಸ್ಥಳೀಯರು ಗಲಾಟೆ ಮಾಡಿಕೊಂಡಿರುವ ಘಟನೆ ನಗರದ 31ನೇ ವಾರ್ಡ್ನ ಕಾಟನ್ ಮಿಲ್ ಪ್ರದೇಶದಲ್ಲಿ ನಡೆದಿದೆ.
ನಮ್ಮ ಪ್ರದೇಶ ಅಭಿವೃದ್ಧಿಯಾಗಿಲ್ಲ ಎಂದು ದಾವಣಗೆರೆ ಪಾಲಿಕೆ ಮೇಯರ್ ಎಸ್.ಟಿ.ವಿರೇಶ್ ಬಳಿ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ಭೇಟಿ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೇಯರ್ ವಿರೇಶ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಸ್ಥಳೀಯರು ಗಲಾಟೆ ಮಾಡಿಕೊಂಡಿದ್ದಾರೆ.
ಗಲಾಟೆಗೆ ಕಾರಣವೇನು?
ಮಳೆಗಾಲದಲ್ಲಿ ತೀವ್ರ ತೊಂದರೆಯಾಗುತ್ತಿದ್ದು, ಡೆಕ್ ಸ್ಲಾಬ್ಗಳನ್ನು ನಿರ್ಮಿಸಬೇಕು. ಅದಕ್ಕಾಗಿ ಇಲ್ಲಿನ ಶೆಡ್ಗಳನ್ನು ತೆರವುಗೊಳಿಸಬೇಕು ಎಂದು ಕೆಲ ಸ್ಥಳೀಯರು ಮೇಯರ್ ಅವರನ್ನು ಒತ್ತಾಯಿಸಿದರು. ಆದರೆ, ಶೆಡ್ ನಿರ್ಮಿಸಿಕೊಂಡಿದ್ದ ವ್ಯಕ್ತಿಯೊಬ್ಬ ನಾನು ಶೆಡ್ ತೆರವು ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ.
ಆಗ ಸ್ಥಳೀಯರು ಆತನ ವಿರುದ್ಧ ಕೂಗಾಡಿದ್ದು, ಇದರಿಂದ ಸಿಟ್ಟಿಗೆದ್ದ ಆ ವ್ಯಕ್ತಿ ಜಗಳ ತೆಗೆದಿದ್ದಾನೆಂಬ ಆರೋಪ ಕೇಳಿಬಂದಿದೆ. ಅಲ್ಲದೇ, ಮೇಯರ್ ಮುಂದೆಯೇ ಗಲಾಟೆ ಹೊಡೆದಾಡುವ ಹಂತಕ್ಕೆ ತಲುಪಿತ್ತು. ಬಳಿಕ ಮಧ್ಯ ಪ್ರವೇಶಿಸಿದ ಮೇಯರ್ ವಿರೇಶ್ ಹಾಗು ಪಾಲಿಕೆ ಸದಸ್ಯ ನಾಗರಾಜ್ ಜಗಳ ಬಿಡಿಸಿದರು.
ಇದನ್ನೂ ಓದಿ: ಪತ್ನಿ ಫೋಟೋಗೆ ಹೂ ತರಲೆಂದು ನಡೆದು ಬರುತ್ತಿದ್ದ ವ್ಯಕ್ತಿಯ ಮೇಲೆ ಹರಿದ ಲಾರಿ