ದಾವಣಗೆರೆ: ಕೊರೊನಾ ಕಾರಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಇಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಅವರೇ ಆಸಕ್ತಿ ತೆಗೆದುಕೊಂಡು ಚಾಲನೆ ನೀಡುತ್ತಿದ್ದಾರೆ.
ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಇಂದಿಗೂ ಪ್ರಸ್ತುತ. ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಆರ್ಥಿಕ ಸ್ವಾವಲಂಬನೆಗೆ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಅತ್ಯಗತ್ಯ. ಹೀಗಾಗಿಯೇ ಈ ಹಿಂದೆ ಸಿಎಂ ಆಗಿದ್ದ ಹೆಚ್ ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿ ಜನರ ಗಮನ ಸೆಳೆದಿದ್ರು. ಈಗ ಮತ್ತೆ ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು ಜಿಲ್ಲಾಧಿಕಾರಿ ನಡೆ ಗ್ರಾಮ ವಾಸ್ತವ್ಯ ಕಡೆ ಎಂಬ ವಿನೂತನ ಕಾರ್ಯಕ್ರಮ ಶುರು ಮಾಡಿ ಯಶಸ್ವಿ ಆಗಿದ್ರು. ಆದರೆ ಕೊರೊನಾ ಹಿನ್ನೆಲೆ ಗ್ರಾಮ ವಾಸ್ತವ್ಯಕ್ಕೆ ಹಿನ್ನೆಡೆಯಾಗಿತ್ತು. ಇದೀಗ ಮತ್ತೆ ಗ್ರಾಮ ವಾಸ್ತವ್ಯಕ್ಕೆ ಕಾಲ ಕೂಡಿ ಬಂದಿದೆ.
ಸ್ವತಃ ಸಿಎಂ ಅವರೇ ಆಸಕ್ತಿ ತೋರಿ ಗ್ರಾಮ ವಾಸ್ತವ್ಯಕ್ಕೆ ಚಾಲನೆ:
ಈ ಬಗ್ಗೆ ಸ್ವತಃ ಸಿಎಂ ಅವರೇ ಆಸಕ್ತಿ ತೋರಿದ್ದು, ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಕುಂದೂರು, ಸುರಹೊನ್ನೆ ಗ್ರಾಮಗಳಲ್ಲಿ ಇಂದು ಕಂದಾಯ ಸಚಿವ ಆರ್. ಅಶೋಕ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಸಿಎಂ ಚಾಲನೆ ನೀಡಿ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯ ತಲುಪಿಸಲಿದ್ದಾರೆ.
ಸಿದ್ಧತೆ ಪರಿಶೀಲನೆ:
ಈ ಗ್ರಾಮ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರ ಸ್ವ ಗ್ರಾಮವಾಗಿದ್ದು, ತಮ್ಮ ಗ್ರಾಮದಲ್ಲೇ ವಾಸ್ತವ್ಯ ಮಾಡುವಂತೆ ಸಿಎಂ ಹಾಗೂ ಕಂದಾಯ ಸಚಿವರಿಗೆ ಮನವಿ ಮಾಡಿಕೊಂಡಿದ್ದರಂತೆ. ಈ ಹಿನ್ನೆಲೆ ಕೋವಿಡ್ ನಂತರದ ಗ್ರಾಮ ವಾಸ್ತವ್ಯಕ್ಕೆ ಕುಂದೂರು ಗ್ರಾಮದ ಸರ್ಕಾರಿ ಶಾಲಾ ಮೈದಾನದಲ್ಲಿ ಸಕಲ ಸಿದ್ಧತೆ ನಡೆಸಿದ್ದು, ಶಾಸಕ ಎಂಪಿ ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಹಲವು ಅಧಿಕಾರಿಗಳು ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿ, ಚರ್ಚೆ ನಡೆಸಿದರು.
ಗ್ರಾಮ ವಾಸ್ತವ್ಯಕ್ಕೆ ಸಿಎಂ ಚಾಲನೆ :
ಸಿಎಂ ಬೊಮ್ಮಾಯಿ ಮೊದಲು ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ ಕುಂದೂರು ಗ್ರಾಮಕ್ಕೆ ಆಗಮಿಸಿ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲಿದ್ದಾರೆ. ಸಿಎಂ ಹಾಗೂ ಕಂದಾಯ ಸಚಿವರು ಎತ್ತಿನ ಗಾಡಿಯ ಮೂಲಕ ಆಗಮಿಸಲಿದ್ದು, ಬಳಿಕ ಸರ್ಕಾರದ ಸೌಲಭ್ಯಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ.
ಹಳ್ಳಿ ಕಡೆ ದೃಷ್ಟಿ ಹರಿಸಿದ ಸರ್ಕಾರ:
ಒಟ್ಟಾರೆ ಮಹಾತ್ಮ ಗಾಂಧೀಜಿಯವರ ಆಶಯದಂತೆ ಹೆಚ್ಚು ಗ್ರಾಮಗಳೇ ತುಂಬಿರುವ ಭಾರತದಲ್ಲಿ ಗ್ರಾಮ ಸ್ವರಾಜ್ ಅತ್ಯವಶ್ಯಕ. ಈ ಹಿನ್ನೆಲೆ ಸರ್ಕಾರ ಹಳ್ಳಿ ಕಡೆ ದೃಷ್ಟಿ ಹರಿಸಿದ್ದು, ಸರ್ಕಾರದ ಸೇವೆಗಳು ಬಡವರಿಗೆ ಮುಟ್ಟಬೇಕಿದೆ.
ಇದನ್ನೂ ಓದಿ: ಮಂಗಳೂರು ದಸರೆಗೆ ಅದ್ಧೂರಿ ತೆರೆ... ಹುಲಿವೇಷಕ್ಕೆ ಜನತೆ ಫಿದಾ