ದಾವಣಗೆರೆ : ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ವಿಚಾರ ವಿಧಾನಸಭೆ ಕಲಾಪದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಶಾಸಕ ಗೂಳಿಹಟ್ಟಿ ಶೇಖರ್, ನನ್ನ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಅಂತಹ ಪ್ರಕರಣಗಳು ರಾಜ್ಯದಲ್ಲಿ ಸಾಕಷ್ಟು ನಡೆಯುತ್ತಿವೆ. ಇದನ್ನು ಪ್ರಶ್ನಿಸಿದರೆ ಅತ್ಯಾಚಾರದ ಕೇಸ್ ದಾಖಲಿಸುತ್ತಾರೆ. ಅದಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ಜಾರಿಗೆ ತರಬೇಕೆಂದು ಸ್ಪೀಕರ್ ಕಾಗೇರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.
ಇದನ್ನೂ ಓದಿ: 'ನನ್ನ ತಾಯಿಯನ್ನೂ ಮತಾಂತರ ಮಾಡಿದ್ದಾರೆ..': ಅಧಿವೇಶನದಲ್ಲಿ ನೋವು ತೋಡಿಕೊಂಡ ಗೂಳಿಹಟ್ಟಿ ಶೇಖರ್
ಗೂಳಿಹಟ್ಟಿ ಶೇಖರ್ ಹೇಳಿಕೆಗೆ ದಾವಣಗೆರೆಯ ಕ್ರಿಶ್ಚಿಯನ್ ಫೋರಂ ಭಾರೀ ವಿರೋಧ ವ್ಯಕ್ತಪಡಿಸಿದೆ. ಗೂಳಿಹಟ್ಟಿ ಅವರ ತಾಯಿ ಮತಾಂತರ ವಿಚಾರದಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆ. ಬಲವಂತವಾಗಿ ಮತಾಂತರ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಶಾಸಕ ಗೂಳಿಹಟ್ಟಿ ಶೇಖರ್ ವಿಧಾನಸಭೆ ಚರ್ಚೆಯಲ್ಲಿ ಇಲ್ಲಸಲ್ಲದ ಕಥೆ ಕಟ್ಟಿದ್ದಾರೆ. ಇಡೀ ಸಮುದಾಯವನ್ನ ಗುರಿಯಾಗಿಸಿಕೊಂಡು ಅವಮಾನ ಮಾಡಲಾಗಿದೆ. ರಾಜಕೀಯ ಅಜೆಂಡಾ ಇಟ್ಟುಕೊಂಡ ಸುಳ್ಳು ಆರೋಪ ಮಾಡಲಾಗಿದೆ. ಇದೇ ರೀತಿ ನಿರಂತರ ದೌರ್ಜನ್ಯ ನಡೆದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಕ್ರಿಶ್ಚಿಯನ್ ಫೋರಂ ರಾಜ್ಯಾಧ್ಯಕ್ಷ ರಾಜಶೇಖರ್ ಎಚ್ಚರಿಕೆ ನೀಡಿದರು.