ದಾವಣಗೆರೆ: ನಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ಎರಡೇ ಗಂಟೆಯಲ್ಲಿ ನಾಪತ್ತೆಯಾಗಿದ್ದ ನವಜಾತ ಶಿಶು 21 ದಿನಗಳ ಬಳಿಕ ನಗರದ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದೆ. ನವಜಾತ ಶಿಶುವನ್ನು ಕಳವು ಮಾಡಿದ ಮಹಿಳೆ ಬಸ್ ನಿಲ್ದಾಣದಲ್ಲಿ ಕೂತಿದ್ದ ಓರ್ವ ಅಜ್ಜಿ ಕೈಗೆ ಮಗು ಕೊಟ್ಟು ಕಳೆದ ದಿನ ನಾಪತ್ತೆಯಾಗಿದ್ದಾಳೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಮೂಲದ ಇಸ್ಮಾಯಿಲ್ ಜಬೀವುಲ್ಲಾ ಹಾಗೂ ಉಮೇಸಲ್ಮಾ ದಂಪತಿಗೆ ಸೇರಿದ ಗಂಡು ಮಗು ಕಳ್ಳತನವಾಗಿತ್ತು.
ಮಗು ಇಸ್ಮಾಯಿಲ್ ಜಬೀವುಲ್ಲಾ ಹಾಗು ಉಮೇ ಸಲ್ಮಾ ದಂಪತಿಗೆ ಸೇರಿದ್ದೇ? ಎಂದು ಪರಿಶೀಲನೆ ನಡೆಸಲು ಪೋಲಿಸರು ಡಿಎನ್ಎ ಪರೀಕ್ಷೇಗೆ ಮುಂದಾಗಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಪೊಲೀಸರು ಮಗುವನ್ನು ಪೋಷಕರಿಗೆ ಹಸ್ತಾಂತರ ಮಾಡಲಿದ್ದಾರೆ. ಮಾರ್ಚ್ 16ರಂದು ದಾವಣಗೆರೆ ನಗರದ ಚಾಮರಾಜಪೇಟೆಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಜನಿಸಿದ ಎರಡೇ ಗಂಟೆಯಲ್ಲಿ ಮಗು ನಾಪತ್ತೆಯಾಗಿತ್ತು.
ಮಗು ಪತ್ತೆಯಾಗಿದ್ದು ಹೇಗೆ?: ಮಗುವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದ್ದ ಅಪರಿಚಿತ ಮಹಿಳೆ ಕಳೆದ ದಿನದ ತಡರಾತ್ರಿ ದಾವಣಗೆರೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪಕ್ಕದಲ್ಲಿ ಕುಳಿತ ವೃದ್ಧೆ ಕೈಗೆ ಮಗುಕೊಟ್ಟು ಪರಾರಿಯಾಗಿದ್ದಾರೆ.
ಮಗುಬಿಟ್ಟು ಹೋದ ವಿಚಾರ ಪೊಲೀಸ್ ಗಮನಕ್ಕೆ ಬಂದ ತಕ್ಷಣ ಮಹಿಳಾ ಠಾಣೆಯ ಪೋಲಿಸರು ಮಗುವನ್ನು ರಕ್ಷಣೆ ಮಾಡಿದ್ದಾರೆ. ಆದರೆ ಮಗು ಇಸ್ಮಾಯಿಲ್ ಜಬೀವುಲ್ಲಾ ಹಾಗೂ ಉಮೇಸಲ್ಮಾ ದಂಪತಿಗೆ ಸೇರಿದ್ದೇ ಎನ್ನುವುದಕ್ಕೆ ಡಿಎನ್ಎ ಪರೀಕ್ಷೆ ನಡೆಸಿ ನಂತರ ಮಗುವನ್ನು ತಾಯಿಗೆ ಹಸ್ತಾಂತರ ಮಾಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗು ಕಳುವಾಗಿದ್ದಕ್ಕೆ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ದಾವಣಗೆರೆ ನವಜಾತ ಶಿಶು ನಾಪತ್ತೆ ಪ್ರಕರಣ: ಮಗು ಹುಡುಕಿ ಕೊಟ್ಟವರಿಗೆ ₹25 ಸಾವಿರ ಬಹುಮಾನ