ಬೆಂಗಳೂರು: ಚನ್ನಪಟ್ಟಣದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಪಕ್ಷ ತೊರೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್ ಸೇರಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್, ರಾಮನಗರ ಡಿಸಿಸಿ ಅಧ್ಯಕ್ಷ ಗಂಗಾಧರ್, ಚನ್ನಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಸುನೀಲ್, ಕಾಂಗ್ರೆಸ್ ಮುಖಂಡ ಶಿವಮಾದು ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಪ್ರಸನ್ನ ಪಿ. ಗೌಡ, ಬುಕ್ಕಸಾಗರ ಕುಮಾರ್, ಪ್ರಕಾಶ್, ಶಾಶ್ವತ್ ಗೌಡ, ನಿಸಾರ್, ಸೊಹೆಬ್, ಸಂತೋಷ್ ಕುಮಾರ್ ಮತ್ತಿತರರು ಕಾಂಗ್ರೆಸ್ ಗೆ ಸೇರ್ಪಡೆಯಾದರು. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ನಾನು ಚನ್ನಪಟ್ಟದಲ್ಲಿ ಈ ಸಭೆ ಮಾಡಲು ನಿರ್ಧರಿಸಿದ್ದೆ. ಆದರೆ ನಾನು, ಸಂಸದ ಡಿ ಕೆ ಸುರೇಶ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜಸ್ಥಾನದ ಉದಯಪುರದಲ್ಲಿ ಒಂದು ವಾರ ನಡೆಯಲಿರುವ ಪಕ್ಷದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಇಲ್ಲಿಯೇ ಮಾಡಿದ್ದೇವೆ ಎಂದು ಹೇಳಿದರು.
ಚನ್ನಪಟ್ಟಣದಲ್ಲಿ ನಮಗೆ ಹೆಚ್ಚಿನ ಸಂಖ್ಯೆ ಬಾರದಿದ್ದರೂ, ಕ್ಷೇತ್ರದ ಜನ ಕಷ್ಟಕಾಲದಲ್ಲಿ ನಮ್ಮ ಪಕ್ಷವನ್ನು ಉಳಿಸಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಮಗೆ ಚನ್ನಪಟ್ಟಣದಿಂದ ಉತ್ತಮ ಬೆಂಬಲ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕು, ಜನರ ಕಷ್ಟಕ್ಕೆ ಸ್ಪಂದಿಸುವವರಿಗೆ ಆದ್ಯತೆ ನೀಡಬೇಕು ಎಂಬುದು ನಮ್ಮ ಆಶಯ ಎಂದರು.
ಇದನ್ನೂ ಓದಿ: ಮೈಸೂರಿಗೆ ಆಗಮಿಸಿ ತಂದೆ ಹುಟ್ಟುಹಬ್ಬ ಆಚರಿಸಿದ IMF ಪ್ರಥಮ ಉಪಮುಖ್ಯಸ್ಥೆ ಗೀತಾ ಗೋಪಿನಾಥ್