ದಾವಣಗೆರೆ : ಬಿಜೆಪಿಗೆ ಬೆಂಬಲಿಸುವುದು ಜೆಡಿಎಸ್ ಜಿಲ್ಲಾ ಕಾರ್ಯಕರ್ತರಿಗೆ ಬಿಟ್ಟಿರುವ ವಿಚಾರ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರ ಹೇಳಿಕೆ ನನಗೆ ಸಂತಸ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ. ಬೆಂಬಲ ಕೊಡುವುದು ಜಿಲ್ಲೆಯ ಕಾರ್ಯಕರ್ತರಿಗೆ ಬಿಟ್ಟಿರುವ ವಿಚಾರ ಎಂದು ಹೆಚ್‌ಡಿಕೆ ಹೇಳಿರುವುದು ನನಗೆ ಖುಷಿ ತಂದಿದೆ.
ಎಲ್ಲಿ ಜೆಡಿಎಸ್ ಅಭ್ಯರ್ಥಿಗಳಿಲ್ಲವೋ ಅಲ್ಲಿ ಬಿಜೆಪಿಗೆ ಸಹಜವಾಗಿ ಸಹಕಾರ ಸಿಗುತ್ತೆ ಎಂಬ ನಂಬಿಕೆ ನನಗಿದೆ. ಸ್ಥಳೀಯ ನಾಯಕರು ಬಿಜೆಪಿಗೆ ಬೆಂಬಲಿಸುತ್ತಾರೆ ಅನ್ನೋ ವಿಶ್ವಾಸ ಇದೆ. ಎಲ್ಲಿ ಕಾಂಗ್ರೆಸ್ ಪ್ರಭಾವ ಜಾಸ್ತಿ ಇದೆಯೋ ಅಲ್ಲಿ ಜೆಡಿಎಸ್ ಬೆಂಬಲ ಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
15 ಸ್ಥಾನ ಗೆಲ್ಲಲಿದ್ದೇವೆ : 25 ವಿಧಾನ ಪರಿಷತ್ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೇವೆ. ಆ ಪೈಕಿ 15 ಸ್ಥಾನಗಳಲ್ಲಿ ನಾವು ಗೆಲ್ಲಲ್ಲಿದ್ದೇವೆ. ಎಲ್ಲ ಸಚಿವರು, ನಾನು ಪ್ರವಾಸ ಮಾಡಿದ್ದೇವೆ. ಚುನಾವಣೆಯಲ್ಲಿ ನಮ್ಮ ಗೆಲುವು ಖಚಿತ, ವಿಧಾನಪರಿಷತ್ನಲ್ಲಿ ಬಹುಮತ ಬರಲಿದೆ. ಯಾರ ಮೇಲೂ ಡಿಪೆಂಡ್ ಆಗಲ್ಲ ಎಂದರು.
ವಿಜಯೇಂದ್ರಗೆ ಸಚಿವ ಸ್ಥಾನ-ವರಿಷ್ಠರಿಗೆ ಬಿಟ್ಟ ವಿಚಾರ : ಸಚಿವ ಸಂಪುಟ ವಿಸ್ತರಣೆ ಮಾಡುವ ವಿಚಾರ ಹಾಗೂ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ನೀಡುವುದು ಕೇಂದ್ರಕ್ಕೆ ಹಾಗೂ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಸ್ಪರ್ಧೆ ಮಾಡಿ ಮಾಜಿ ಸಚಿವ ಚಿಮ್ಮನಕಟ್ಟಿಯವರಿಗೆ ಅನ್ಯಾಯ ಮಾಡಿದ್ದಾರೆ ಎಂಬ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ನಾನು ಈ ವಿಚಾರವಾಗಿ ಪ್ರತಿಕ್ರಿಯಿಸಲ್ಲ. ಕಾದು ನೋಡೋಣ ಎಂದು ಹೇಳಿದರು.
ಇದನ್ನೂ ಓದಿ: ಯಡಿಯೂರಪ್ಪ ಬೆಂಬಲ ನೀಡಿ ಎಂದಿದ್ದಾರಷ್ಟೇ, ಬಿಜೆಪಿ ಜತೆಗೆ ಮೈತ್ರಿ ಇಲ್ಲ: ಹೆಚ್‌ಡಿಕೆ ಸ್ಪಷ್ಟನೆ