ದಾವಣಗೆರೆ: ಕೇಂದ್ರ ಸರ್ಕಾರ ನಿನ್ನೆ 1200 ಕೋಟಿ ರೂ. ಮಧ್ಯಂತರ ಪರಿಹಾರ ಹಣ ಬಿಡುಗಡೆ ಮಾಡಿದ್ದು, ಒಂದೇ ಸಲ ಬಿಡುಗಡೆ ಮಾಡಲು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ ಎಂದು ಸಂಸದ ಜಿ ಎಂ ಸಿದ್ದೇಶ್ವರ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಅತಿವೃಷ್ಟಿ ಪರಿಹಾರಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭಾ ಕ್ಷೇತ್ರದ ಸಂಸದ ಜಿ ಎಂ ಸಿದ್ದೇಶ್ವರ್, ಪ್ರಕೃತಿ ವಿಕೋಪದಲ್ಲಿ ಎಷ್ಟೇ ನಷ್ಟವಾದ್ರೂ ಅದರ 10% ಹಣವನ್ನು ಕೇಂದ್ರ ಸರ್ಕಾರ ಕೊಡುತ್ತದೆ. 38 ಸಾವಿರ ಕೋಟಿ ನಷ್ಟವಾದ್ರೆ ಅದರ 10% ಹಣ ಬರುತ್ತದೆ. ರಾಜ್ಯ ಸರ್ಕಾರವು ಈಗಾಗಲೇ 3 ಸಾವಿರ ಕೋಟಿ ರೂ. ಖರ್ಚು ಮಾಡಿ ಕೆಲಸ ಮಾಡುತ್ತಿದೆ. ಹಂತ ಹಂತವಾಗಿ ಕೆಲಸ ಮಾಡಬೇಕಾಗುತ್ತದೆ. ಒಂದೇ ಸಾರಿ ಎಲ್ಲಾ ಹಣ ಬಿಡುಗಡೆ ಮಾಡಲು ಬ್ರಹ್ಮನಿಂದಲೂ ಸಾಧ್ಯವಿಲ್ಲ. ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚಿನ ಪರಿಹಾರ ಹಂತ ಹಂತವಾಗಿ ಬಂದೇ ಬರುತ್ತದೆ ಎಂದು ಜಿ.ಎಂ ಸಿದ್ದೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.