ದಾವಣಗೆರೆ: ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಹಿನ್ನೆಲೆ ಅನ್ಯ ಜಿಲ್ಲೆಯ ಜನಪ್ರತಿನಿಧಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ವಿರೋಧ ಪಕ್ಷದ ಕಾಂಗ್ರೆಸ್ ಮುಖಂಡರು ಉಪ ಆಯುಕ್ತರ ವಿರುದ್ಧ ಹರಿಹಾಯ್ದಿದ್ದಾರೆ.
ದಾವಣಗೆರೆ ನಗರದ ಮಹಾನಗರ ಪಾಲಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ರಾಣೆಬೆನ್ನೂರು ಕ್ಷೇತ್ರದ ನಿವಾಸಿ ಹಾಗೂ ಸಚಿವ ಆರ್. ಶಂಕರ್ ಹೆಸರನ್ನು ಹಾಗೂ ತುಮಕೂರಿನ ಎಂಎಲ್ಸಿ ಚಿದಾನಂದ ಗೌಡ ಅವರ ಹೆಸರನ್ನು ದಾವಣಗೆರೆ ಮತದಾರರ ಪಟ್ಟಿಗೆ ಮಹಾ ನಗರ ಪಾಲಿಕೆಯ ಆಯುಕ್ತರು ಸೇರಿಸಿದ್ದಾರೆ ಎಂದು ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಕೆಪಿಸಿಸಿ ಸದಸ್ಯ ಡಿ ಬಸವರಾಜ್ ಸೇರಿದಂತೆ ಹಲವು ಮುಖಂಡರು ಪಾಲಿಕೆ ಉಪ ಆಯುಕ್ತ ಚಂದ್ರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಕಳೆದ ಬಾರಿ ಪಾಲಿಕೆ ಮೇಯರ್ ಚುನಾವಣೆ ಸಂದರ್ಭದಲ್ಲೂ ಅನ್ಯ ಜಿಲ್ಲೆಯ ಎಂಎಲ್‌ಸಿಗಳ ಸೇರ್ಪಡೆ ಮಾಡಿದ್ರು, ಈ ಬಾರಿಯೂ ಅಧಿಕಾರಿಗಳು ಅದೇ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯ ಕೆಲವು ಎಂಎಲ್‌ಸಿಗಳು ಕೇವಲ ಮೇಯರ್ ಚುನಾವಣೆಯಲ್ಲಿ ಮಾತ್ರ ಮುಖ ತೋರಿಸುತ್ತಿದ್ದು, ಅವರಿಂದ ದಾವಣಗೆರೆ ನಗರಕ್ಕೆ ಯಾವುದೇ ಅನುದಾನ ದೊರೆತಿಲ್ಲ. ದಾವಣಗೆರೆ ನಿವಾಸಿಗಳಲ್ಲದ ಎಂಎಲ್‌ಸಿಗಳ ಹೆಸರನ್ನು ಮತದಾರ ಪಟ್ಟಿಗೆ ಸೇರಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆಯ 45 ಸದಸ್ಯ ಸ್ಥಾನಗಳಲ್ಲಿ 23 ಕಾಂಗ್ರೆಸ್, 17 ಬಿಜೆಪಿ, 1 ಜೆಡಿಎಸ್, 4 ಪಕ್ಷೇತರ ಬಲವಿದೆ. ಪಾಲಿಕೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಈ ಕಾರ್ಯದಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿದ್ದು, ಇದನ್ನು ತಡೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.