ದಾವಣಗೆರೆ: ಅಪ್ರಾಪ್ತೆಯನ್ನು ಪ್ರೀತಿಸುವುದಾಗಿ ನಂಬಿಸಿ, ಆಕೆಯನ್ನೇ ಅಪಹರಿಸಿದ ವ್ಯಕ್ತಿ ಜೈಲು ಪಾಲಾಗಿದ್ದಾನೆ. ಆರೋಪಿಗೆ ದಾವಣಗೆರೆಯ 2ನೇಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷಗಳ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ದಾವಣಗೆರೆಯ ಆಜಾದ್ ನಗರದ ಸುಭಾನ್ ಶಿಕ್ಷೆಗೊಳಗಾದ ಆರೋಪಿ. ಸ್ಥಳೀಯ ನಿವಾಸಿಯೊಬ್ಬರ ನಿವಾಸದಿಂದ ಬಾಲಕಿಯನ್ನು ಆರೋಪಿ ಸುಭಾನ್ ಅಪಹರಿಸಿ, ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಕರೆದುಕೊಂಡು ಹೋಗಿದ್ದ. ಸುಭಾನ್ ಮೇಲಿರುವ ಆರೋಪ ಸಾಬೀತಾದ ಹಿನ್ನೆಲೆ ಜೈಲು ಶಿಕ್ಷೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಆರೋಪಿ ಸುಭಾನ್ ಕಳೆದ 2019 ರಲ್ಲಿ ಬಾಲಕಿಯನ್ನು ಮದುವೆಯಾಗುವುದಾಗಿ ಹೇಳಿ ಪ್ರೀತಿಸುವ ನಾಟಕವಾಡಿದ್ದ. ಬಳಿಕ ಆಕೆಯನ್ನು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿದ್ದ, ಇದರಿಂದ ಸಂತ್ರಸ್ತೆಯ ಅಜ್ಜಿ ದಾವಣಗೆರೆ ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದರು. ಮಹಿಳಾ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಅಂದಿನ ಠಾಣಾಧಿಕಾರಿ ಪ್ರಕಾಶ್, ಆರೋಪಿ ಸುಭಾನ್ ವಿರುದ್ಧ ದೋಷರೋಪಾಣೆ ಪಟ್ಟಿ ಸಲ್ಲಿಸಿದ್ದರು.
(ಇದನ್ನೂ ಓದಿ: ಅಕ್ಕನ ಚಿತೆಗೆ ಹಾರಿ ಪ್ರಾಣ ಬಿಟ್ಟ ಸಹೋದರ.. ಸಾಗರದಲ್ಲೊಂದು ಮನಕಲಕುವ ಘಟನೆ)