ದಾವಣಗೆರೆ : ಇಲ್ಲಿನ ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆಗೆ ಬಂದಿದ್ದ ಅಸ್ತಮಾ ರೋಗಿಯೊಬ್ಬರಿಗೆ ತುರ್ತು ಚಿಕಿತ್ಸೆ ದೊರಕದೇ ಸಾವನ್ನಪ್ಪಿದ್ದು, ಅವರ ಕುಟುಂಬಸ್ಥರು ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ಕಿಡಿಕಾರಿದ್ದಾರೆ.
ಚಿಗಟೇರಿ ಜಿಲ್ಲಾಸ್ಪತ್ರೆ ಚಿತ್ರದುರ್ಗ ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಯ ಜನರ ಸಂಜೀವಿನಿಯಾಗಿದೆ. ಸಾಕಷ್ಟು ಬೇಡಿಕೆ ಇರುವ ಈ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮರೀಚಿಕೆಯಾಗುತ್ತಿದೆ. ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ, ಬಡವರು ಬಂದರೆ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ ಎಂಬುವ ಗಂಭೀರ ಆರೋಪ ಆಸ್ಪತ್ರೆ ಮೇಲಿದೆ. ಆಸ್ಪತ್ರೆಯ ಸಮಸ್ಯೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ಜನರ ದೂರು.
ಆದದ್ದೇನು? : ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದಾವಣಗೆರೆಯ ಶಂಕರಮಠದ ನಿವಾಸಿ ಹನುಮಂತರಾವ್ ಎಂಬುವರನ್ನು ಆತನ ಮಗ ಅಜಯ್ ಕುಮಾರ್ ಆ್ಯಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಿದ್ದಾರೆ. ಆದರೆ, ಹೆಚ್ಚಿನ ವೆಚ್ಚವಾದ ಕಾರಣ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಈ ವೇಳೆ ವೈದ್ಯರು ಇಲ್ಲ ಎಂಬ ಕಾರಣಕ್ಕಾಗಿ ರೋಗಿ ಹನುಮಂತರಾವ್ರನ್ನು ವಾರ್ಡ್ನಿಂದ ವಾರ್ಡ್ಗೆ ಅಲೆದಾಡಿಸಿದ್ದಾರೆ. ಸಮಯ ಮೀರಿದ್ದರಿಂದ ಹನುಮಂತರಾವ್ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಯಲ್ಲೇ ಒಂದು ಗಂಟೆಗೂ ಅಧಿಕ ಕಾಲಹರಣ ಮಾಡಿದ್ದರಿಂದ ನಮ್ಮ ತಂದೆಯನ್ನು ಕಳೆದುಕೊಳ್ಳಬೇಕಾಯಿತು ಎಂದು ಮೃತನ ಪುತ್ರ ಅಜಯ್‌ಕುಮಾರ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪಿಸಿದ್ದಾರೆ.
ಇದಲ್ಲದೇ, ಚಿಕಿತ್ಸೆಗೆಂದು ಬಂದ ರೋಗಿಗಳ ಮೇಲೆಯೇ ವೈದ್ಯರು, ಸಿಬ್ಬಂದಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಬಡತನ ಕಾರಣ ಸರ್ಕಾರಿ ಆಸ್ಪತ್ರೆಗೆ ಬಂದರೆ, ಇವರು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ ಎಂದು ಆರೋಪಿಸಿರುವ ಅಜಯ್‌ಕುಮಾರ್, ಸರ್ಕಾರಿ ಆಸ್ಪತ್ರೆ ಇರೋದಾದರೂ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಆಧ್ಯಾತ್ಮಿಕ ಪ್ರಭಾವಕ್ಕೆ ಒಳಗಾಗಿ ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ ಕೊನೆಗೂ ಪತ್ತೆ!