ದಾವಣಗೆರೆ: ಆರು ವರ್ಷದ ಬಾಲಕಿಯೊಬ್ಬಳು ಕಾಡಿನಲ್ಲಿ 24 ಗಂಟೆಗಳ ಕಾಲ ಕಳೆದಿರುವ ಘಟನೆ ಹರಿಹರ ತಾಲೂಕಿನ ಮಲೇಬೆನ್ನೂರು ಸಮೀಪದ ಬಳಿಯ ಕೊಮಾರನಹಳ್ಳಿ ಅರಣ್ಯದಲ್ಲಿ ನಡೆದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಬಾಲಕಿಯನ್ನು ವಾಪಸ್ ಕರೆ ತರುವ ಮೂಲಕ ಪೋಷಕರ ಆತಂಕವನ್ನು ದೂರ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಕಾಡು ಪ್ರಾಣಿಗಳ ಕೈಗೆ ಸಿಗದೆ ಬಾಲಕಿ ಪಾರಾಗಿದ್ದಾರೆ.
ಘಟನೆ: ಪಾಲಕರು ಮೆಕ್ಕೆಜೋಳದ ತೆನೆ ಮುರಿಯಲು ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ಬಾಲಕಿ ಆಟವಾಡುತ್ತಾ ಅರಣ್ಯದೊಳಗೆ ಪ್ರವೇಶಿಸಿದ್ದಾಳೆ. ಸುಮಾರು ಐದು ಕಿಲೋಮೀಟರ್ ನಡೆದುಕೊಂಡೇ ಹೋಗಿದ್ದಾಳೆ. ಜಮೀನ ಬಳಿ ಬಾಲಕಿ ಕಾಣದ್ದನ್ನು ಕಂಡು ಗಾಬರಿಗೊಳಗಾದ ಪೋಷಕರು ನಿರಂತರ ಹುಡುಕಾಟ ನಡೆಸಿದರು. ತಮ್ಮ ಮತ್ತು ಸುತ್ತಮುತ್ತಲಿನ ಜಮೀನಿನಲ್ಲಿ ಹುಡುಕಿದರೂ ಪತ್ತೆಯಾಗಿರಲಿಲ್ಲ.
ಕಾಡಿನಲ್ಲಿ ಅಮ್ಮಾ, ಅಮ್ಮಾ ಎಂದು ಬಾಲಕಿ ಅಳುತ್ತಾ ಕೂಗುತ್ತಿದ್ದಳು. ಅಳುವ ಕೂಗು ಕೇಳಿದ ಅರಣ್ಯ ಇಲಾಖೆ ಸಿಬ್ಬಂದಿ ಆಕೆಯನ್ನು ಪತ್ತೆ ಹಚ್ಚಿದ. ಸಿಬ್ಬಂದಿ ಮುನ್ನಾ ಎಂಬಾತ ಬಾಲಕಿಗೆ ಅಪ್ಪ-ಅಮ್ಮನ ಜೊತೆಗೆ ಬಿಡುವುದಾಗಿ ಹೇಳಿ ಧೈರ್ಯ ತುಂಬಿದರು. ಬಳಿಕ ಊರಿಗೆ ಬಂದು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.