ದಾವಣಗೆರೆ : ನಿಷೇಧದ ನಡುವೆಯೂ ರಾಜ್ಯದಲ್ಲಿ 5,080 ಮ್ಯಾನ್‌ಹೋಲ್ ಸ್ಕ್ಯಾವೆಂಜರ್(ಮಲಗುಂಡಿ ಸ್ವಚ್ಛಗೊಳಿಸುವವರು) ಇದ್ದಾರೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಸ್ಪೋಟಕ ಮಾಹಿತಿ ನೀಡಿದ್ದಾರೆ.
ನಗರದ ಚಿಗಟೇರಿ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮ್ಯಾನ್‌ಹೋಲ್ ಸ್ಕ್ಯಾವೆಂಜರ್ ಪದ್ದತಿ ಸಂಪೂರ್ಣ ನಿಷೇಧವಿದೆ. ಆದ್ರೆ, ಇಂತಹ ಕಾರ್ಮಿಕರು ಕಲಬುರಗಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಸೇರಿದಂತೆ 8ಕ್ಕೂ ಹೆಚ್ಚು ಜನ ಮ್ಯಾನ್‌ಹೋಲ್ ಸ್ಕ್ಯಾವೆಂಜರ್ಗಳು ಸಾವನ್ನಪ್ಪಿದ್ದಾರೆ.
ಇದಕ್ಕೆ ಕಾರಣರಾದ ಅಧಿಕಾರಿಗಳನ್ನ ಶಿಕ್ಷೆಗೆ ಗುರಿ ಪಡಿಸಿದರು ಕೂಡ ಈ ಪದ್ದತಿ ಸಂಪೂರ್ಣವಾಗಿ ನಿಂತಿಲ್ಲ. ಜತೆಗೆ ಈ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಇನ್ನೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜನವರಿಯಲ್ಲಿ ಸಿಎಂ ಜತೆ ನಡೆಯುವ ಸಭೆಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗುವುದು. ಈಗಾಗಲೇ ಸಫಾಯಿ ಕರ್ಮಚಾರಿ ನಿಗಮ ಸಹ ಇದೆ. ಆದ್ರೆ, ಆ ನಿಗಮಕ್ಕೆ ನಿರೀಕ್ಷಿತ ಮಟ್ಟದಲ್ಲಿ ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿಲ್ಲ ಎಂದು ಶಿವಣ್ಣ ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಏಜೆನ್ಸಿ ಮೂಲಕ ವೇತನ ಪೂರೈಕೆ ನಿಷೇಧಿಸಬೇಕು : ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಏಜೆನ್ಸಿಗಳ ಮೂಲಕ ಕಾರ್ಮಿಕರಿಗೆ ಪೂರೈಕೆ ಆಗುವ ವೇತನ ನಿಷೇಧ ಆಗಬೇಕು. ಏಕೆಂದರೆ, ಏಜೆನ್ಸಿಗಳು ಕಾರ್ಮಿಕರಿಗೆ ಸೂಕ್ತ ವೇತನ ನೀಡುತ್ತಿಲ್ಲ. ಸರ್ಕಾರವೇ ಕಾರ್ಮಿಕರನ್ನ ನೇರ ನೇಮಕಾತಿ ಮಾಡಿಕೊಳ್ಳುವಂತಾಗಬೇಕು. ಇಷ್ಟರಲ್ಲಿ ಮುಖ್ಯಮಂತ್ರಿಗಳ ಜತೆ ಸಭೆ ನಡೆಯಲಿದೆ. ಇದು ರದ್ಧಾಗುವಂತೆ ಸಿಎಂ ಅವರಿಗೆ ಆಗ್ರಹಿಸುತ್ತೇನೆ ಎಂದರು.