ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿ ಸೋಮವಾರ ಪ್ರಮುಖವಾಗಿ ಚಟುವಟಿಕೆ ಕೇಂದ್ರವಾಗಿ ಗೋಚರಿಸಿತು. ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್ ಅವರು, ಶಾಸಕ ಸೋಮಶೇಖರ್ ರೆಡ್ಡಿಗೆ ಮಾನ ಮರ್ಯಾದೆ ಇದ್ಯಾ ಎಂದು ಪ್ರಶ್ನಿಸಿದರು ಹೇಳಿಕೆ ಕೊಟ್ಟು ನಂತರ ನಾನು ಹಾಗೆ ಹೇಳಿಲ್ಲ ಅನ್ನುತ್ತಾನೆ. ಡಿಜಿಗೆ ದೂರು ಕೊಟ್ಟಿದ್ದೇವೆ. ಅವನ ವಿರುದ್ಧ ದೂರು ದಾಖಲಿಸಿಕೊಂಡು ಇನ್ನೂ ಬಂಧಿಸಿಲ್ಲ ಅಂದರೆ ಅವನ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡುತ್ತೇನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ನಾವು ಏನ್ ಕೈಗೆ ಕಡಗ ತೊಡ್ಕೊಂಡಿದ್ದೀವಾ? ಖಡ್ಗ ತರ್ತೀವಿ ಅಂತೀರಲ್ಲ. ನೀ ಎಲ್ಲಿಯವನು ಸೋಮಶೇಖರ್ ಆಂಧ್ರದಿಂದ ಬಂದು ಇಲ್ಲಿ ರಾಜಕೀಯ ಮಾಡುತ್ತಿದ್ದೀಯಾ? ನಾವು ಹಿಂದೂ-ಮುಸ್ಲಿಂ ದೇಶದಲ್ಲಿ ಅಣ್ಣ ತಮ್ಮಂದಿರ ರೀತಿಯಲ್ಲಿ ಇದ್ದೇವೆ ಸೋಮಶೇಖರ್ ಎಂದು ಟಾಂಗ್ ಕೊಟ್ಟರು.
ಸೋಮಶೇಖರ್ ರೆಡ್ಡಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಂದಿನ ಸೋಮವಾರದವರೆಗೆ ಕಾಯುತ್ತೇನೆ. ಇಲ್ಲದೇ ಹೋದರೆ ಸೋಮಶೇಖರ್ ರೆಡ್ಡಿ ಮನೆ ಮುಂದೆ ನಾನೇ ಧರಣಿ ಕೂರುತ್ತೇನೆ. ಏನ್ ಮಾಡ್ತಾನೋ ಮೊದಲು ನನಗೇ ಮಾಡಲಿ ನೋಡೋಣ. ಮೊದಲು ನನ್ನನ್ನ ಉಫ್ ಅಂತ ಹಾರಿಸಲಿ ನೋಡೋಣ ಎಂದು ಎದೆ ತಟ್ಟಿ ಸೋಮಶೇಖರ್ ರೆಡ್ಡಿಗೆ ಜಮೀರ್ ಸವಾಲು ಹಾಕಿದ್ರು.