ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಇರುವ ಆರೋಪ ನಿರಾಧಾರ. ರಾಜ್ಯ ಬಿಜೆಪಿ ಸರ್ಕಾರ ಯಾವುದೇ ತನಿಖೆ ಬೇಕಾದರೂ ನಡೆಸಲಿ ಎಂದು ಶಾಸಕ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಜೊತೆ ತಾವು ಕಾಣಿಸಿಕೊಂಡಿದ್ದೇ ಎಂಬ ಆರೋಪವನ್ನು ಚಿತ್ರ ವಿತರಕ ಪ್ರಶಾಂತ ಸಂಬರಗಿ ಮಾಡಿದ್ದಾರೆ. ರಾಜ್ಯದಲ್ಲಿ ಅವರ ಬಿಜೆಪಿ ಸರ್ಕಾರವೇ ಇದೆ. ಯಾವುದೇ ತನಿಖೆ ನಡೆಸಲಿ. ಒಂದು ವೇಳೆ ನನ್ನ ಮೇಲಿರುವ ಆರೋಪ ಸಾಬೀತು ಮಾಡಿದ್ರೆ ನನ್ನ ಎಲ್ಲ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ನಾನು ಕೊಲಂಬೋಗೆ ಸಂಜನಾ ಜೊತೆ ಹೋಗಿದ್ದೆ ಎಂದು ಸಾಬೀತುಪಡಿಸಲಿ. ನಾವು ಅಲ್ಲಿಗೆ ಹೋಗಿದ್ದರೆ ವಿಮಾನದಲ್ಲಿ ತೆರಳಬೇಕು. ಅದರ ಮಾಹಿತಿ ಸಿಗಲಿದೆ. ಇನ್ನು ನಾವು ಹೋಟೆಲ್ನಲ್ಲಿ ಉಳಿದಿದ್ದರೆ ಅಲ್ಲಿ ಪಾಸ್ ಪೋರ್ಟ್ ಆಧಾರವಾಗಿ ನೀಡಬೇಕು. ಇನ್ನು ಯಾವುದೇ ಹೋಟೆಲ್ ಇದ್ದರೂ, ಅಲ್ಲಿ ಸಿಸಿಟಿವಿ ಪುಟೇಜ್ ಇರುತ್ತದೆ. 10 ವರ್ಷ ಅದನ್ನು ದಾಖಲೆಯಾಗಿ ಇರಿಸಿಕೊಳ್ಳಲಾಗುತ್ತದೆ. ತೆಗೆಸಿ ನೋಡಲಿ, ನಾನು ಸಂಜನಾ ಅವರ ರೂಮಿಗೆ ಹೋಗಿದ್ನಾ, ಒಂದೇ ಹೋಟೆಲ್ನಲ್ಲಿ ಉಳಿದಿದ್ವಾ ಅನ್ನುವ ಮಾಹಿತಿ ಸಿಗಲಿದೆ. ಪ್ರಶಾಂತ್ ಸಂಬರಗಿ ಮಾಡುವ ಆರೋಪ ಸಾಬೀತಾದರೆ ನನ್ನ ಆಸ್ತಿ ಸರ್ಕಾರಕ್ಕೆ ಬರೆದುಕೊಡುತ್ತೇನೆ. ಇಲ್ಲವಾದರೆ ಸಂಬರಗಿ ಏನು ಮಾಡುತ್ತಾರೆ ಅಂತ ತಿಳಿಸುತ್ತಾರಾ? ಎಂದು ಪ್ರಶ್ನಿಸಿದ್ದಾರೆ.