ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವಕನೋರ್ವ ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ರೈಲ್ವೆ (selfie death in Mandya) ಮೇಲ್ಸೇತುವೆಯಿಂದ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಾಂಡವಪುರ ಮೂಲದ ಅಭಿಷೇಕ್ ಮೃತ ಯುವಕ. ಪಾಂಡವಪುರಕ್ಕೆ ತೆರಳುತ್ತಿದ್ದ ವೇಳೆ ರೈಲಿನ ಬಾಗಿಲಿನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಹೋಗಿ, ಕಂಬಿ ಡಿಕ್ಕಿಯಾಗಿ ಸೇತುವೆ ಮೇಲಿಂದ ಲೋಕಪಾವನಿ ನದಿಗೆ ಬಿದ್ದು, ಮೃತ ಪಟ್ಟಿದ್ದಾನೆ.
ಘಟನೆ ಹಿನ್ನೆಲೆ
ಗಾಂಧಿನಗರದ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್, ಇದೇ ತಿಂಗಳು 6 ರಂದು ಸ್ನೇಹಿತರೊಂದಿಗೆ ರೈಲಿನಲ್ಲಿ ಊರಿಗೆ ಹೋಗುತ್ತಿದ್ದ. ಮಾರ್ಗದುದ್ದಕ್ಕೂ ಸ್ನೇಹಿತರೊಂದಿಗೆ ಸೆಲ್ಫಿ ಫೋಟೋಗಳನ್ನು ತೆಗೆದಿದ್ದ. ಮಧ್ಯರಾತ್ರಿ ಪಾಂಡವಪುರ ರೈಲ್ವೆ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಸ್ನೇಹಿತರೆಲ್ಲರೂ ಇಳಿದಿದ್ದರು. ಆದರೆ ಅಭಿಷೇಕ್ ಮಾತ್ರ ಕಾಣೆಯಾಗಿದ್ದ. ಸತತ ಶೋಧ ನಡೆಸಿದರೂ ಅಭಿಷೇಕ್ ಸುಳಿವು ಸಿಕ್ಕಿರಲಿಲ್ಲ. ಅಲ್ಲಿಂದ ಸ್ನೇಹಿತೆರಲ್ಲ ಮನೆಗೂ ಹೋಗಿದ್ದರು. ಎರಡು ದಿನವಾದರೂ ಅಭಿಷೇಕ್ ಬಾರದ ಹಿನ್ನೆಲೆ ಆತಂಕಗೊಂಡ ಮನೆಯವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಶಿವಸ್ವಾಮಿ ನೇತೃತ್ವದ ತಂಡ ಪಾಂಡವಪುರಕ್ಕೆ ರೈಲಿನಲ್ಲಿ ಹೋಗಿರುವ ಬಗ್ಗೆ ಸ್ನೇಹಿತರಿಂದ ಮಾಹಿತಿ ಸಂಗ್ರಹಿಸಿ, ಮಂಡ್ಯ ಪೊಲೀಸರು ಹಾಗೂ ಸ್ಥಳೀಯ ಅಗ್ನಿಶಾಮಕದಳಕ್ಕೂ ಮಾಹಿತಿ ನೀಡಿದ್ದರು. ನಾಲ್ಕು ಐದು ದಿನಗಳ ಕಾಲ ಹುಡುಕಾಟ ನಡೆಸಿದ್ದರೂ ಅಭಿಷೇಕ್ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.
ಬಳಿಕ ಕೊನೆ ರೈಲಿನಲ್ಲಿ ಸೆಲ್ಫಿ ತೆಗೆದುಕೊಂಡಿದ್ದ ಸ್ಥಳದ ಆಧಾರದ ಮೇಲೆ ಕಾವೇರಿ ಉಪನದಿಯಾಗಿ ಲೋಕಪಾವನಿ ನದಿ ರೈಲ್ವೆ ಬ್ರಿಡ್ಜ್ ನಿಂದ ಕಂಬಿಗೆ ಡಿಕ್ಕಿಯಾಗಿ ಕೆಳಗೆ ಬಿದ್ದಿರಬಹುದು ಎಂಬ ಶಂಕೆ ಮೇರೆಗೆ ಅಗ್ನಿಶಾಮಕದಳ ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ ನದಿಯಲ್ಲಿ ಶೋಧ ನಡೆಸಲಾಗಿದೆ. ಸತತ ಮೂರು ದಿನಗಳ ಬಳಿಕ ಶ್ರೀರಂಗಪಟ್ಟಣ ಬಳಿಯ ಆರು ಕಿಲೋಮೀಟರ್ ದೂರದ ನದಿ ನೀರಿನಲ್ಲಿ ಅಭಿಷೇಕ್ ಶವ ಪತ್ತೆಯಾಗಿದೆ.
ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುವಾಗ ರೈಲ್ವೆ ಬಾಗಿಲು ಬಳಿ ನಿಲ್ಲಬೇಡಿ. ಸೆಲ್ಫಿ ಗೀಳಿಗೆ ಮುಂದಾಗಿ ರೈಲಿನ ಬಾಗಿಲಿನಲ್ಲಿ ನಿಂತುಕೊಳ್ಳಬೇಡಿ ಎಂದು ಡಿಸಿಪಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.