ಬೆಂಗಳೂರು: ಇಂದು ರಾಷ್ಟ್ರೀಯ ವೈದ್ಯರ ದಿನ. ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಎಲ್ಲಾ ವೈದ್ಯರಿಗೂ ಬಿ.ಸಿ.ರಾಯ್ ಅವರ ಮನೋಸ್ಥೈರ್ಯ ಸಿಗಲಿ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆಸಲ್ಲಿಸುತ್ತಿರುವ ಡಾ.ನಮೃತಾ ತಿಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕೊರೊನಾ ವಿರುದ್ಧ ಮುನ್ನುಗ್ಗಿ, ಮುಂದೆ ನಿಂತು ಹೋರಾಡುತ್ತಿದ್ದೇವೆ. ನಮ್ಮನ್ನ ನಾವು ರಕ್ಷಣೆ ಮಾಡಿಕೊಳ್ಳಲು ಪಿಪಿಇ ಕಿಟ್ ಹಾಕುತ್ತೇವೆ. ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಉಸಿರಾಡಲು ಜಾಗವೂ ಇರಲ್ಲ. ತಲೆಸುತ್ತು ಬಂದು ಬಿದ್ದಿದೇವೆ. ಆರು ಗಂಟೆ ನೀರು, ಊಟ ಏನೂ ಸೇವಿಸುವ ಹಾಗಿಲ್ಲ. ದೈಹಿಕ ಮತ್ತು ಮಾನಸಿಕ ದಂಡನೆ ಇದ್ದರೂ ಕಷ್ಟ ಅಂದುಕೊಳ್ಳುವುದಿಲ್ಲ. ಕೊರೊನಾ ಸೋಂಕಿತರನ್ನ ಗುಣಪಡಿಸುವುದು ನಮ್ಮ ಉದ್ದೇಶ ಎಂದರು.
ಇಂದು ಡಾ.ಬಿಧಾನ್ ಚಂದ್ರ ರಾಯ್ ವೈದ್ಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿ ದೇಶಕ್ಕೆ ಸಲ್ಲಿಸಿದ ಕೊಡುಗೆಯನ್ನ ನೆನೆಯುವ ದಿನ. ಇದನ್ನ ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಿಸುತ್ತೇವೆ. ನಮ್ಮ ಪೋಷಕರು ನಮ್ಮನ್ನು ಹುರಿದುಂಬಿಸಿ ವೈದ್ಯ ವೃತ್ತಿಗೆ ಕಳುಹಿಸುತ್ತಿದ್ದಾರೆ ಎಂದರು.
ಇನ್ನು, ಡಾ.ವಿಕಾಸ್ ಮಾತನಾಡಿ, ಮೂರು ತಿಂಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳನ್ನ ನೋಡಿಕೊಳ್ಳುತ್ತಿದ್ದೇವೆ. 50 ಜನ ಡಾಕ್ಟರ್ಸ್, 450 ರೋಗಿಗಳನ್ನು ನೋಡಿಕೊಂಡಿದ್ದೇವೆ. ರೋಗಿಗಳು ಗುಣಮುಖರಾಗಿ ಡಿಶ್ಚಾರ್ಜ್ ಆದ ದಿನ ಧನ್ಯವಾದ ತಿಳಿಸಿದರೆ ಸಾಕು, ಅದೇ ನಮಗೆ ದೊಡ್ಡ ಕೃತಜ್ಞತೆ. ಕೊರೊನಾ ಬಗ್ಗೆ ಭಯ ಬೇಡ. ಹೆಚ್ಚಾಗಿ ಹರಡುತ್ತಿರುವುದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.