ಬೆಂಗಳೂರು: ಇನ್ನೇನು ಹೊಸ ವರ್ಷ 2022 ಬಂದೇ ಬಿಟ್ಟಿತು. ಆದರೆ ಈ ವರ್ಷ ಕೊರೊನಾ ಆತಂಕದ ನಡುವೆ ಹಲವು ರೀತಿಯ ಸಂಕಷ್ಟವನ್ನು ನಾವು ಎದುರಿಸಿದ್ದೇವೆ. ಇದೆಲ್ಲದರ ಮಧ್ಯೆ ಬೆಂಗಳೂರಿನಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳೂ ನಡೆದಿವೆ. ನಾನಾ ಕಾರಣಗಳಿಂದ ನಗರದಲ್ಲಿ ವರದಿಯಾದ ಅಪರಾಧಗಳ ಜೊತೆಗೆ ಭೀಕರ ಅಪಘಾತಗಳು ಸಂಭವಿಸಿವೆ.
1. ರಾಸಲೀಲೆ ಸಿಡಿ ಪ್ರಕರಣ:
ರಾಜ್ಯ ರಾಜಕಾರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿತ್ತು. ಅಧಿಕಾರ ಪ್ರಭಾವ ಬಳಸಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಯುವತಿ ಗಂಭೀರ ಆರೋಪ ಮಾಡಿದರೆ, ವೈರಲ್ ಆಗಿರುವ ವಿಡಿಯೋ ನನ್ನದಲ್ಲ ಎಂದು ಮಾಜಿ ಸಚಿವರು ಮೊದಲಿಗೆ ದೂರು ನೀಡಿದ್ದರು. ನಂತರ ಎಸ್ಐಟಿ ವಿಚಾರಣೆ ವೇಳೆ ವಿಡಿಯೊದಲ್ಲಿರುವುದು ನಾನೇ ಎಂದು ಹೇಳಿಕೆ ನೀಡಿದ್ದರು. ಸಿಡಿ ಪ್ರಕರಣ ಬೆಳಕಿಗೆ ಬಂದ ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಸದ್ಯ ಪ್ರಕರಣ ವಿಚಾರಣೆಯ ಹಂತದಲ್ಲಿದೆ.
2. ಬಿಟ್‌ಕಾಯಿನ್ ಕೇಸ್:
ಸರ್ಕಾರಿ ವೆಬ್‌ಸೈಟ್ ಸೇರಿದಂತೆ ಇನ್ನಿತರೆ ಆ್ಯಪ್ಗಳನ್ನು ಹ್ಯಾಕ್ ಮಾಡಿದ್ದ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಯ ಬಿಟ್‌ಕಾಯಿನ್ ಅವ್ಯವಹಾರ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿತು. ಬಿಟ್‌ಕಾಯಿನ್ ಅವ್ಯವಹಾರದ ಹಿಂದೆ ಬಿಜೆಪಿ ಸಚಿವರು ಹಾಗೂ ಐಪಿಎಸ್ ಅಧಿಕಾರಿಗಳ ಕೈವಾಡವಿರುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಬಿಜೆಪಿಯವರು ಸಹ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದರು. ಸರ್ಕಾರದ ಮಟ್ಟದಲ್ಲಿ ದೊಡ್ಡ ಚರ್ಚೆಯಾಗಿತ್ತು. ಇ-ಪ್ರೊಕ್ಯರ್ಮೆಂಟ್ ಜಾಲತಾಣ ಹ್ಯಾಕ್ ಮಾಡಿರುವ ಶ್ರೀಕಿ 9 ಕೋಟಿ ರೂ. ಹಣ ಲಪಾಟಾಯಿಸಿದ ಆರೋಪ ಎದುರಿಸುತ್ತಿದ್ದಾನೆ. ಚೀನಿ ಆ್ಯಪ್ ಸೇರಿದಂತೆ ಪೋಕರ್ ಗೇಮ್ಗಳನ್ನು ಹ್ಯಾಕ್ ಮಾಡಿ ಬಿಟ್ ಕಾಯಿನ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು ಬೆಳಕಿಗೆ ಬಂದಿದೆ. ಕಳೆದ ನವೆಂಬರ್‌ನಲ್ಲಿ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಬಂಧನಕ್ಕೂ ಒಳಗಾಗಿ ಇದೀಗ ಜಾಮೀನು ಪಡೆದು ಹೊರಬಂದಿದ್ದಾನೆ.
3. ರೇಖಾ ಕದಿರೇಶ್ ಹತ್ಯೆ:
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ರಾಜಕೀಯ ಹಾಗೂ ಹಣಕಾಸಿನ ಕಾರಣಕ್ಕಾಗಿ ಸಂಬಂಧಿಕರು ಹಾಗೂ ಪರಿಚಯಸ್ಥರೇ ಜೂನ್ 24 ರಂದು ಮಾರಕಾಸ್ತ್ರಗಳಿಂದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ರೌಡಿಶೀಟರ್ ಮಾಲಾ, ಸೂರ್ಯ, ಪೀಟರ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿ ಕಾಟನ್‌ಪೇಟೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು.
4. ಎರಡು ಸಾವಿರಕ್ಕೂ ಹೆಚ್ಚು ರೌಡಿಗಳ ಮೇಲೆ ದಾಳಿ:
ನಗರದ 8 ವಿಭಾಗಗಳಲ್ಲಿ ಕಳೆದ ಜುಲೈನಲ್ಲಿ 2 ಸಾವಿರಕ್ಕೂ ಹೆಚ್ಚು ರೌಡಿಶೀಟರ್ಗಳ ಮೇಲೆ ದಾಳಿ ನಡೆಸಲಾಗಿತ್ತು. ಮನೆಯಲ್ಲಿದ್ದ ಮಾರಕಾಸ್ತ್ರಗಳು, ಮಾದಕ ವಸ್ತುಗಳೂ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ಕೊಲೆಯತ್ನ, ದರೋಡೆ, ಹಫ್ತಾ ವಸೂಲಿ, ಸುಲಿಗೆ ಹಾಗೂ ಡ್ರಗ್ಸ್ ದಂಧೆ ಸೇರಿದಂತೆ ಇನ್ನಿತರೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿ ನಗರದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದರು.
5. ಬಾಂಗ್ಲಾ ಯುವತಿ ಮೇಲೆ ಆತ್ಯಾಚಾರ
ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ ಬಾಂಗ್ಲಾ ಯುವತಿ ಮೇಲೆ ಮೃಗೀಯ ರೀತಿಯಲ್ಲಿ ಕಾಮುಕರು ಆತ್ಯಾಚಾರ ಎಸಗಿದ್ದರು. ಲೈಂಗಿಕ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಿಂಚಿನ ಕಾರ್ಯಾಚರಣೆ ನಡೆಸಿದ್ದ ರಾಮಮೂರ್ತಿನಗರ ಪೊಲೀಸರು 10ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಎನ್ಐಎ ಸಹ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು.
6. ಆತ್ಮಹತ್ಯೆ-ಅಪಘಾತಗಳಲ್ಲಿ ಹೋದ ಜೀವಗಳು:
ಕೌಟುಂಬಿಕ ಕಾರಣಕ್ಕಾಗಿ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಒಂದೇ ಕುಟುಂಬದ ಐವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜಧಾನಿಯನ್ನು ಬೆಚ್ಚಿ ಬೀಳಿಸಿತ್ತು. ಆಗಸ್ಟ್ 30ರಂದು ಹೊಸೂರು ಕ್ಷೇತ್ರದ ಮಾಜಿ ಶಾಸಕನ ಪುತ್ರ ಕರುಣಾಸಾಗರ್ ಓಡಿಸುತ್ತಿದ್ದ ಕಾರು ಆಡುಗೋಡಿ ಬಳಿ ರಸ್ತೆ ವಿಭಜಕಕ್ಕೆ ಗುದ್ದಿ ಏಳು ಮಂದಿ ಸಾವನ್ನಪ್ಪಿದ್ದರು. ಇದಾದ ಕೆಲವೇ ದಿನಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದರು. ಅಪಘಾತದ ರಭಸಕ್ಕೆ ಬೈಕ್ ಸವಾರ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಜೀವ ಕಳೆದುಕೊಂಡ ದುರಂತ ಈ ವರ್ಷ ನಡೆದಿತ್ತು.
7. ಅಗ್ನಿ ಅವಘಡ:
ಕಳೆದ ಸೆಪ್ಟೆಂಬರ್ನಲ್ಲಿ ಬೊಮ್ಮನಹಳ್ಳಿಯ ಅಪಾರ್ಟ್ಮೆಂಟ್ನಲ್ಲಾದ ಅಗ್ನಿ ಅವಘಡದಲ್ಲಿ ತಾಯಿ ಲಕ್ಷ್ಮೀದೇವಿ, ಪುತ್ರಿ ಭಾಗ್ಯರೇಖಾ ಸಜೀವ ದಹನಗೊಂಡಿದ್ದರು. ಅದೇ ರೀತಿ ವಿವಿ ಪುರಂ ಬಳಿಯ ಶ್ರೀ ಪತ್ರಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋದಾಮಿನಲ್ಲಿ ನಡೆದಿದ್ದ ಪಟಾಕಿ ಸ್ಫೋಟ ಪ್ರಕರಣದಲ್ಲಿ ಐವರು ಮೃತರಾಗಿದ್ದರು. ಹತ್ತಾರು ಮನೆಗಳು ಹಾಗೂ ಬೈಕ್‌ಗಳು ಹಾನಿಗೊಳಗಾಗಿದ್ದವು. ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಕಾರ್ಖಾನೆಯೊಂದರಲ್ಲಿ ನಡೆದ ಸಿಲಿಂಡರ್ ಸ್ಫೋಟ ಐವರು ಕಾರ್ಮಿಕರನ್ನು ಬಲಿ ಪಡೆದಿತ್ತು.
8. ಬೆಡ್ ಬ್ಲಾಕ್, ನಕಲಿ ರೆಮಿಡಿಸಿವರ್ ಮಾರಾಟ:
ಕೊರೊನಾ ಲಾಕ್ಡೌನ್ ವೇಳೆ ಸಂದಿಗ್ಧ ಪರಿಸ್ಥಿತಿಯಲ್ಲೂ ಬೆಡ್ ಬ್ಲಾಕ್ ಮಾಡುವುದು, ಕಾಳಸಂತೆಯಲ್ಲಿ ರೆಮಿಡಿಸಿವರ್ ಮಾರಾಟ ಮಾಡುವುದು, ನಕಲಿ ರೆಮಿಡಿಸಿವರ್, ನಕಲಿ ನೆಗೆಟಿವ್ ರಿಪೋರ್ಟ್, ಅಕ್ರಮವಾಗಿ ಸ್ವಾಬ್ ಟೆಸ್ಟ್, ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ ಪ್ರಕರಣಗಳಲ್ಲಿ 100ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಯಿತು.
ಇದನ್ನೂ ಓದಿ: ಪತಿಯೊಂದಿಗೆ ಗೋವಾದಿಂದ ಮುರ್ಡೇಶ್ವರಕ್ಕೆ ಬಂದಿದ್ದ ನವವಿವಾಹಿತೆ ನಾಪತ್ತೆ