ಬೆಂಗಳೂರು : ಕೇಂದ್ರದಿಂದ ನೆರೆ ನೆರವು ತರುವ ವಿಚಾರದಲ್ಲಿ ಸಿಎಂ ಅಸಹಾಯಕರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ 25 ಬಿಜೆಪಿ ಸಂಸದರು ಗೆದ್ದು ಹೋಗಿದ್ದಾರೆ.
ಅವರು ಪ್ರಧಾನಿ ಮುಂದೆ ಮಾತನಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಎಂಪಿಗಳು ಸಿಎಂಗೆ ಸಾಥ್ ಕೊಡ್ಬೇಕು. ಆದರೆ, ಕೊಡ್ತಿಲ್ಲ. ಜಿಎಸ್ಟಿ ಅಥವಾ ನೆರೆ ಪರಿಹಾರದ ಬಗ್ಗೆ ಯಾರು ಮಾತನಾಡ್ತಿಲ್ಲ. ರಾಜ್ಯಕ್ಕೆ ದ್ರೋಹ ಮಾಡ್ತಿರೋದು ರಾಜ್ಯದ ಎಂಪಿಗಳು ಎಂದರು.
ಸಿಎಂ ಬರ್ತಾರೆ, ಹೋಗ್ತಾರೆ, ಅವರನ್ನ ಕಾಯಬೇಕಿಲ್ಲ. ರಾಜ್ಯದ ಪ್ರಾಜೆಕ್ಟ್ಗಳ ಬಗ್ಗೆ ಇವರೇ ಮಾತನಾಡಿತರಬಹುದು. ಹಿಂದೆಯೂ ಅವರು ಮಾತನಾಡಿಲ್ಲ. ಈಗ ಕುರ್ಚಿ ಭಯದಿಂದ ಅವರು ಮಾತನಾಡ್ತಿಲ್ಲ. ಮತದಾರರು ಮತ ನೀಡಿ ಅವರನ್ನ ಕಳಿಸಿಕೊಟ್ಟಿದ್ದಾರೆ. ರಾಜ್ಯದ ಜನರೇ ಪ್ರಶ್ನೆ ಮಾಡಬೇಕು ಎಂದು ರಾಜ್ಯದ ಬಿಜೆಪಿ ಸಂಸದರ ವಿರುದ್ಧ ಡಿಕೆಶಿ ಲೇವಡಿ ಮಾಡಿದರು.
ರಾಮಲಿಂಗಾರೆಡ್ಡಿ ಅಸಾಮಾಧಾನ : ಎಐಸಿಸಿಯಲ್ಲಿ ಸ್ಥಾನನೀಡದ ಹಿನ್ನೆಲೆ ರಾಮಲಿಂಗಾರೆಡ್ಡಿ ಅಸಮಾಧಾನ ವಿಚಾರ ಪ್ರಸ್ತಾಪಿಸಿ, ರಾಮಲಿಂಗಾರೆಡ್ಡಿಯವರು ನನ್ನಷ್ಟೇ ಸೀನಿಯರ್ ಲೀಡರ್. ಅವರಿಗೆ ಎಲ್ಲಾ ಅರ್ಹತೆಗಳು ಇವೆ. ಹೈಕಮಾಂಡ್ ಗಮನಕ್ಕೆ ಈ ವಿಚಾರಗಳನ್ನ ತರ್ತೇನೆ. ಅವರಿಗೆ ಅನ್ಯಾಯ ಆಗಿರೋದು ನಿಜ. ಅದನ್ನ ಸರಿಪಡಿಸುವ ಕೆಲಸ ನಾನು ಮಾಡ್ತೇನೆ. ಖರ್ಗೆಯವರಿಗೆ, ಕೆಬಿಜೆ, ಹೆಚ್ಕೆಪಿ ಅವರಿಗೆ ಅವಕಾಶ ಕೊಟ್ಟಿದ್ದಾರೆ. ರಾಮಲಿಂಗಾರೆಡ್ಡಿ ಸೇರಿ ಇನ್ನೂ ಹಿರಿಯರು ಇದ್ದಾರೆ. ಅವರಿಗೆ ಅವಕಾಶಗಳನ್ನ ಕೊಡಬೇಕು ಎಂದು ಹೇಳಿದರು.
ಸುಮ್ಮನೆ ಯಾರಿಗೂ ನೋಟಿಸ್ ಕೊಡಲ್ಲ : ಕಾಂಗ್ರೆಸ್ ಕಾರ್ಪೊರೇಟರ್ ಯುವರಾಜ್ಗೆ ಸಿಸಿಬಿ ನೋಟಿಸ್ ವಿಚಾರ ಪ್ರಸ್ತಾಪಿಸಿ, ಸುಮ್ಮನೆ ಯಾರಿಗೋ ನೋಟಿಸ್ ಕೊಡೋಕೆ ಬರಲ್ಲ. ಪೊಲೀಸರು ಮಾಹಿತಿಯ ಮೇಲೆಯೇ ಕೊಡ್ತಾರೆ. ಏಕಾಏಕಿ ಯಾರಿಗೋ ಕೋಡೋ ಪ್ರಯತ್ನವಿಲ್ಲ. ನೋಟಿಸ್ ಕೊಡೋದು ತಪ್ಪಲ್ಲ. ಆದರೆ, ಅದರ ಹಿಂದೆ ರಾಜಕೀಯ ಒತ್ತಡ ಇರಬಾರದಷ್ಟೇ ಎಂದರು.
ಸಭೆ ಸೇರಿ ಚರ್ಚಿಸಿದ್ದೇವೆ : ವಿಧಾನಸಭೆ ಅಧಿವೇಶನದಲ್ಲಿ ಯಾವ ವಿಚಾರ ಹೇಗೆ ತೆಗೆದುಕೊಳ್ಬೇಕು ಅಂತe ಸಿಎಲ್ಪಿ ಮೀಟಿಂಗ್ ಮಾಡಿ ಚರ್ಚೆ ಮಾಡಿದ್ದೇವೆ. ಇರೋದು ಏಳೆಂಟು ದಿನ ಕಲಾಪ. ಅವರು ತಂದಿರೋ ಬಿಲ್ ನೋಡಿದ್ರೆ ಗಾಬರಿಯಾಗುತ್ತೆ. ಡಿಜೆಹಳ್ಳಿ ಪ್ರಕರಣ, ಕೊರೊನಾ, ಮೆಡಿಕಲ್ ಕಿಟ್ ಹಗರಣ, ಆಡಳಿತ ವೈಫಲ್ಯ ಇದೆಲ್ಲದರ ಬಗ್ಗೆ ಪ್ರಸ್ತಾಪ ಮಾಡ್ತೇವೆ ಎಂದರು.
ಸರ್ಕಾರದಲ್ಲಿ ಕೋರ್ಡಿನೇಶನ್ ಸರಿಯಾಗಿಲ್ಲ. ಯಾವ್ಯಾವ ಇಲಾಖೆಯಲ್ಲಿ ಇನ್ಯಾರೋ ಆಡಳಿತ ನಡೆಸ್ತಾರೆ. ಕೊರೊನಾ ಇದ್ದಾಗಲೇ ಹಲವರನ್ನ ಚೇಂಜ್ ಮಾಡಿದ್ರು. ಕೆಲವರು ಅಧಿಕಾರಿಗಳನ್ನೂ ಬದಲಾಯಿಸಿದ್ರು. ಬಿಐಇಸಿಯನ್ನ ಮುಚ್ಚಿದ್ದಾರೆ. ಇದರ ಬಗ್ಗೆ ಮಾಧ್ಯಮಗಳೂ ವರದಿ ಮಾಡಿವೆ. ಇದೆಲ್ಲವೂ ಸರ್ಕಾರದ ವೈಫಲ್ಯವೇ ಅಲ್ಲವೇ? ಎಂದು ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.