ಬೆಂಗಳೂರು: ಹಿಜಾಬ್ ಪ್ರಕರಣದ ತೀರ್ಪು ನೀಡಿರುವ ಮುಖ್ಯ ನ್ಯಾಯಮೂರ್ತಿ ಸೇರಿ ಮೂವರು ನ್ಯಾಯಾಧೀಶರಿಗೆ ವೈ ಶ್ರೇಣಿಯ ಭದ್ರತೆ ನೀಡಲು ನಿರ್ಧರಿಸಿದ್ದು, ಕೊಲೆ ಬೆದರಿಕೆ ಹಾಕಿರುವ ಆರೋಪಿಗಳನ್ನು ತಮಿಳುನಾಡಿನಿಂದ ಕರ್ನಾಟಕಕ್ಕೆ ಕರೆತಂದು ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಮೂವರು ನ್ಯಾಯಾಧೀಶರ ಮೇಲೆ ಬೆದರಿಕೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣ ದಾಖಲಾಗಿದೆ. ಕೆಲವು ದೇಶದ್ರೋಹಿ ಶಕ್ತಿಗಳು ಈ ದೇಶದ ವ್ಯವಸ್ಥೆಗೆ ಸವಾಲು ಹಾಕುವ ಪ್ರಯತ್ನ ಮಾಡಿವೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ. ನ್ಯಾಯಾಂಗದಲ್ಲಿ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಮತ್ತು ತೀರ್ಪು ಸರಿ ಅನ್ನಿಸದಿದ್ದರೆ ಮೇಲ್ಮನವಿ ಸಲ್ಲಿಸುವ ಎಲ್ಲಾ ವ್ಯವಸ್ಥೆ ಇದೆ. ಇಷ್ಟೆಲ್ಲ ಇದ್ದರೂ ವಿಛಿದ್ರಕಾರಿ ಶಕ್ತಿಗಳು ಈ ರೀತಿ ಹೇಳಿಕೆ ಕೊಟ್ಟು ಜನರನ್ನು ಬಡಿದೆಬ್ಬಿಸಿ ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಇಂತಹ ಎಲ್ಲಾ ಶಕ್ತಿಗಳನ್ನು ನಾವು ಸಹಿಸಲು ಸಾಧ್ಯವಿಲ್ಲ, ದಮನ ಮಾಡಬೇಕಿದೆ ಎಂದರು.
ಈಗಾಗಲೇ ತಮಿಳುನಾಡಿನಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕ ಬಾರ್ ಅಸೋಸಿಯೇಷನ್ನವರು ಬಂದು ದೂರು ಕೊಟ್ಟಿದ್ದಾರೆ. ಅದರ ಆಧಾರದಲ್ಲಿ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿದೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ಡಿಜಿಗೆ ಆದೇಶ ಕೊಟ್ಟಿದ್ದೇನೆ. ಕೂಡಲೇ ವಿಧಾನಸೌಧ ಪ್ರಕರಣವನ್ನು ತನಿಖೆ ಮಾಡಬೇಕು ಮತ್ತು ತಮಿಳುನಾಡಿನಲ್ಲಿ ದಾಖಲಾದ ಪ್ರಕರಣ ಕುರಿತು ಏನು ಮಾಡಿದ್ದಾರೆ ಅದೆಲ್ಲಾ ನೋಡಿ ಆರೋಪಿಗಳನ್ನು ನಮ್ಮ ವಶಕ್ಕೆ ಪಡೆಯಬೇಕು ಮತ್ತು ಕಠಿಣವಾದ ಸೆಕ್ಷನ್ಗಳನ್ನು ಹಾಕಿ ಕೇಸುಗಳನ್ನು ನಡೆಸಬೇಕು ಎಂದು ಆದೇಶ ಕೊಟ್ಟಿದ್ದೇನೆ. ತೀರ್ಪನ್ನು ಕೊಟ್ಟಂತಹ ಮೂವರು ನ್ಯಾಯಾಧೀಶರಿಗೆ ಈಗಿರುವ ಭದ್ರತೆಯನ್ನು ಹೆಚ್ಚಿಸಬೇಕು. ವೈ ಕೆಟಗರಿಯ ಭದ್ರತೆಯನ್ನು ಕೊಡಬೇಕು ಎನ್ನುವ ತೀರ್ಮಾನವನ್ನು ಸರ್ಕಾರ ಮಾಡಿದೆ ಎಂದರು.
'ಡೋಂಗಿ ಸೆಕ್ಯುಲರ್ಗಳೇ ಮೌನವೇಕೆ?': ಸ್ವಯಂಘೋಷಿತ ಡೋಂಗಿ ಸೆಕ್ಯುಲರ್ಗಳು ಯಾಕೆ ಮೌನವಾಗಿದ್ದೀರಿ ಎಂದು ಪ್ರಶ್ನಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಘಟನೆ ನಡೆದು ಮೂರ್ನಾಲ್ಕು ದಿನವಾಗಿದೆ. ಅವರೆಲ್ಲಾ ಯಾಕೆ ಮೌನವಾಗಿದ್ದಾರೆ. ಹಿಜಾಬ್ ತೀರ್ಪು ನೀಡಿದ ಮೂವರು ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಮಾಡುತ್ತಿದ್ದಾರೆ. ಮತ್ತೆ ಅವರು ಮಾಡುವ ಮುಂದಿನ ಕೃತ್ಯಗಳ ಬಗ್ಗೆ ಸುಳಿವನ್ನು ಕೊಟ್ಟಿದ್ದಾರೆ. ನ್ಯಾಯಾಧೀಶರಗೆ ಅಪಘಾತವಾದರೆ ನಾವು ಜವಾಬ್ದಾರಿಯಲ್ಲ ಎಂದಿದ್ದಾರೆ. ಇಷ್ಟೆಲ್ಲಾ ಆದರೂ ಯಾಕೆ ಮೌನವಾಗಿದ್ದಾರೆ? ಬೇರೆ ವಿಷಯದಲ್ಲಿ ಬಹಳ ದೊಡ್ಡ ದನಿ ಎತ್ತುತ್ತೀರಿ. ಈಗ ಒಂದು ವರ್ಗದ ಜನಕ್ಕೆ ಇಷ್ಟು ಓಲೈಸುವುದು ಜಾತ್ಯತೀತತೆ ಅಲ್ಲ. ಇದು ನಿಜವಾದ ಕೋಮುವಾದ. ಇದನ್ನು ನಾನು ಖಂಡಿಸುತ್ತೇನೆ ಎಂದರು.
ಕೂಡಲೇ ನಿಮ್ಮ ಮೌನವನ್ನು ಮುರಿಯಿರಿ. ಇದನ್ನು ಖಂಡಿಸಿ ನಾವೆಲ್ಲ ಒಂದಾಗಿ ನಿಲ್ಲಬೇಕು. ಇಲ್ಲದೆ ಇದ್ದಲ್ಲಿ ಈ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆಯಾಗಲಿದೆ. ನ್ಯಾಯಾಂಗ ವ್ಯವಸ್ಥೆ ಕಾರಣದಿಂದಲೇ ಇಂದು ದೇಶದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗಿದೆ. ಈಗ ಅದನ್ನೇ ಪ್ರಶ್ನೆ ಮಾಡುತ್ತಿದ್ದಾರೆಂದರೆ ಪ್ರಜಾಪ್ರಭುತ್ವಕ್ಕೆ ಬಹಳ ದೊಡ್ಡ ಆತಂಕ ಇದೆ ಎಂದರ್ಥ. ಹಾಗಾಗಿ ಸರ್ಕಾರವಾಗಿ ನಾವು ಎಲ್ಲಾ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕವಾಗಿ ಎಲ್ಲರೂ ಈ ಘಟನೆಯನ್ನು ಖಂಡಿಸಬೇಕು ಎಂದರು.
'ಎಷ್ಟೇ ಖರ್ಚಾದರೂ, ಸರ್ಕಾರವೇ ಭರಿಸಲಿದೆ': ಪಾವಗಡ ಖಾಸಗಿ ಬಸ್ ದುರಂತದ ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಾಲದೇ ಇದ್ದಲ್ಲಿ ಅಥವಾ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಅವರನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲು ಸೂಚಿಸಲಾಗಿದೆ. ಚಿಕಿತ್ಸೆಗೆ ಎಷ್ಟೇ ಖರ್ಚಾದರೂ ಸರ್ಕಾರವೇ ಭರಿಸಲಿದೆ ಯಾವುದೇ ಚಿಂತೆ ಮಾಡಬೇಡಿ ಎಂದರು.
ಖಾಸಗಿ ಬಸ್ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವ ಬಗ್ಗೆ ನಾವು ಈಗಾಗಲೇ ಹಲವಾರು ಬಾರಿ ಖಾಸಗಿ ಬಸ್ಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆದರೂ ಶಾಲಾ-ಕಾಲೇಜು ಸಮಯದಲ್ಲಿ ಓವರ್ಲೋಡ್ ಹಾಕುತ್ತಿದ್ದಾರೆ. ಈಗಾಗಲೇ ಸಂಬಂಧಪಟ್ಟ ಸಚಿವರಿಗೆ ನಿನ್ನೆಯೇ ಎಲ್ಲವನ್ನೂ ಪರಿಶೀಲಿಸುವಂತೆ ಸೂಚನೆ ನೀಡಿದ್ದೇನೆ. ಯಾರ್ಯಾರು ಓವರ್ ಲೋಡ್ ಹಾಕುತ್ತಾರೋ ಅವರ ಪರವಾನಿಗೆ ರದ್ದುಪಡಿಸುವಂತೆ ಸೂಚಿಸಿದ್ದೇನೆ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಮುಂದಿನ ಕೆಲವೇ ವರ್ಷಗಳ ಬಳಿಕ ಕಾಶ್ಮೀರಕ್ಕೆ ಸಿಆರ್ಪಿಎಫ್ ಅಗತ್ಯವಿರಲ್ಲ: ಅಮಿತ್ ಶಾ ವಿಶ್ವಾಸ