ಬೆಂಗಳೂರು: ನಗರದ ಕೇಂದ್ರ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಯಾರೊಬ್ಬರಿಗೂ ಸೋಂಕು ಕಾಣಿಸಿಕೊಳ್ಳದ ಕಾರಣ ಮಾದರಿಯಾಗಿದೆ. ಅದಕ್ಕೆ ಠಾಣೆಯ ಸಿಬ್ಬಂದಿ ಅನುಸರಿಸುತ್ತಿರುವ ಮುನ್ನೆಚ್ಚರಿಕಾ ಕ್ರಮಗಳು!
ನಗರದ ಬಹುತೇಕ ಪೊಲೀಸ್ ಠಾಣೆಗಳ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಕೆಲವರು ಅದಕ್ಕೆ ಬಲಿಯಾಗಿದ್ದಾರೆ. ಕೇಂದ್ರ ವಿಭಾಗ ವ್ಯಾಪ್ತಿಯಲ್ಲಿ 13 ಪೊಲೀಸ್ ಠಾಣೆಗಳಿವೆ. ಅದರಲ್ಲಿ ವಿಲ್ಸನ್ ಗಾರ್ಡನ್ ಠಾಣೆ ಕೂಡ ಒಂದು. ಇಲ್ಲಿ 70 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಎಲ್ಲರೂ ಕೊರೊನಾ ವೈರಸ್ ತಮ್ಮತ್ತ ಸುಳಿಯದಂತೆ ಎಚ್ಚರ ವಹಿಸಿದ್ದಾರೆ.
ಸಿಬ್ಬಂದಿ ಪ್ರತಿ ದಿನ ಮಾಡುವ ಕೆಲಸಗಳಿವು
ಠಾಣೆಯ ಪಕ್ಕದಲ್ಲಿರುವ ಸಂಚಾರ ಠಾಣೆಯಲ್ಲಿ 6 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದರು. ಹೀಗಾಗಿ ಎಚ್ಚೆತ್ತುಕೊಂಡ ಸಿಬ್ಬಂದಿ ಪ್ರತಿ ದಿನ ಠಾಣೆಯನ್ನು ಸ್ವಚ್ಛಗೊಳಿಸುವುದು, ಎರಡು ಬಾರಿ ಕಷಾಯ ಕುಡಿಯುವುದು ಸೇರಿದಂತೆ ಅಂತರ ಕಾಯ್ದುಕೊಂಡು ಕೆಲಸ ಮಾಡುತ್ತಾರೆ.
ಮಾಸ್ಕ್ ಹಾಕಿಕೊಂಡೇ ಕೆಲಸ ನಿರ್ವಹಣೆ, ಬಿಡುವು ಸಿಕ್ಕಾಗ ವ್ಯಾಯಾಮ, ಶೆಟಲ್ ಬ್ಯಾಡ್ಮಿಂಟನ್ ಆಡುತ್ತಾ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಠಾಣೆಯ ಸಿಬ್ಬಂದಿ ಕಾರ್ಯಕ್ಕೆ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಮೆಚ್ಚುಗೆ ವ್ಯಕ್ತಡಿಸಿದ್ದಾರೆ.