ಬೆಂಗಳೂರು: ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಸ್ಥಾನ ಕೈ ತಪ್ಪಿರುವುದಕ್ಕೆ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ, ಜೆಡಿಎಸ್ ಕದ ತಟ್ಟಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನದ ಮೇಲೆ ಸಿ.ಎಂ. ಇಬ್ರಾಹಿಂ ಕಣ್ಣಿಟ್ಟಿದ್ದರು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಪರಿಷತ್ ಪ್ರತಿಪಕ್ಷದ ಸ್ಥಾನ ಬಿ.ಕೆ. ಹರಿಪ್ರಸಾದ್ ಪಾಲಾಯಿತು.
ಇದರಿಂದ ಅಸಮಾಧಾನಗೊಂಡಿರುವ ಸಿ.ಎಂ. ಇಬ್ರಾಹಿಂ, ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ವಿಧಾನ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡುವುದಾಗಿ ಅವರೇ ಘೋಷಿಸಿದ್ದಾರೆ. ಹಾಗಾಗಿ, ಅವರು ಜೆಡಿಎಸ್ ಸೇರುವುದು ಬಹುತೇಕ ನಿಶ್ಚಯವಾಗಿದೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಸೇರುವ ಒಲವು: ಈ ಹಿಂದೆಯೇ ಸಿ.ಎಂ. ಇಬ್ರಾಹಿಂ ಅವರು ತಮ್ಮ ನಡೆ ಬದಲಿಸಿದ್ದರು. ಇದಕ್ಕೆ ಪೂರಕವೆಂಬಂತೆ ಇಬ್ರಾಹಿಂ ಹಾಗೂ ಹೆಚ್.ಡಿ. ಕುಮಾರಸ್ವಾಮಿ ನಡುವಿನ ರಾಜಕೀಯ ಒಡನಾಟ ಹೆಚ್ಚಾಗಿತ್ತು.
ಕಳೆದ ಸೆಪ್ಟೆಂಬರ್ನಲ್ಲಿ ಬಿಡದಿಯ ತೋಟದ ಮನೆಯಲ್ಲಿ ಕುಮಾರಸ್ವಾಮಿಯನ್ನು ಭೇಟಿ ಮಾಡಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೂ ಮುನ್ನ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಜೆಡಿಎಸ್ ಸೇರುವ ಒಲವು ತೋರಿಸಿದ್ದರು.
ಪಕ್ಷ ಬಿಡದಂತೆ ಮನವೊಲಿಕೆ: ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಜೆಡಿಎಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಇಬ್ರಾಹಿಂಗೆ ನೀಡುವ ಬಗ್ಗೆ ಚರ್ಚೆ ಆಗಿತ್ತು. ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತ್ಯೇಕವಾಗಿ ಇಬ್ರಾಹಿಂ ನಿವಾಸಕ್ಕೆ ಹೋಗಿ ಪಕ್ಷ ಬಿಡದಂತೆ ಮನವೊಲಿಸಿದ್ದರು.
ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಂಡರೇ? ಕಾಂಗ್ರೆಸ್‌ನಲ್ಲಿ ತಮಗೆ ಪ್ರಾಶಸ್ಯ ಸಿಗುತ್ತಿಲ್ಲ, ಸಿದ್ದರಾಮಯ್ಯ ಮುಸ್ಲಿಂ ಸಮುದಾಯದ ಮತ್ತೊಬ್ಬ ನಾಯಕ ಜಮೀರ್ ಅಹ್ಮದ್ ಅವರನ್ನು ಬೆಳೆಸುತ್ತಿದ್ದಾರೆ ಎಂದು ಅಸಮಾಧಾನಗೊಂಡು ಅಂತರ ಕಾಯ್ದುಕೊಂಡಿದ್ದರು.
ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಕೂಡ ಇಬ್ರಾಹಿಂ ಮನೆಗೆ ತೆರಳಿ ಸಮಾಧಾನಪಡಿಸಿದ್ದರು. ಆದರೂ ಇಬ್ರಾಹಿಂ ಇತ್ತೀಚೆಗೆ ನಡೆದ ಯಾವ ಚುನಾವಣೆಯಲ್ಲೂ ಕಾಂಗ್ರೆಸ್ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿರಲಿಲ್ಲ.
ಪಕ್ಷ ತೊರೆಯುವ ಹೇಳಿಕೆ: ಸಿದ್ದರಾಮಯ್ಯನವರ ಆಪ್ತ ಬಣದಲ್ಲಿದ್ದ ಇಬ್ರಾಹಿಂ ಅಲ್ಲಿಂದ ದೂರವಾಗುತ್ತಾ ಬಂದರು. ಕರ್ನಾಟಕ ಕಾಂಗ್ರೆಸ್‌ನಲ್ಲಿ ಆಯಕಟ್ಟಿನ ಹುದ್ದೆಗೆ ಅಲ್ಪಸಂಖ್ಯಾತರ ನೇಮಕವಾಗುವುದೇ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆಯನ್ನು ನೀಡಿ, ಪಕ್ಷದ ಮೇಲೆ ತಮಗಿರುವ ಮುನಿಸನ್ನು ಹೊರಹಾಕಿದ್ದರು. ಇದೀಗ ಬಹಿರಂಗವಾಗಿಯೇ ಪಕ್ಷ ತೊರೆಯುವ ಹೇಳಿಕೆ ನೀಡಿದ್ದು, ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಜೊತೆ ನನ್ನ ಸಂಬಂಧ ಕಡಿದಿದೆ.. ಶೀಘ್ರ ಎಂಎಲ್ಸಿ ಸ್ಥಾನಕ್ಕೂ ರಾಜೀನಾಮೆ: ಸಿ ಎಂ ಇಬ್ರಾಹಿಂ ಘೋಷಣೆ
ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿರುವ ಕುಮಾರಸ್ವಾಮಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ. ಹಾನಗಲ್, ಸಿಂದಗಿ ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪ್ರಯೋಗ ನಡೆಸಿದ್ದ ಅವರು, ಇದೀಗ ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಅವರನ್ನು ಜೆಡಿಎಸ್‌ಗೆ ಕರೆ ತರುವ ಪ್ರಯತ್ನ ಮುಂದುವರಿಸಿದ್ದಾರೆ. ನಿನ್ನೆ ಸಹ ಕುಮಾರಸ್ವಾಮಿ ಅವರು ದೂರವಾಣಿ ಕರೆ ಮಾಡಿ ಇಬ್ರಾಹಿಂ ಜೊತೆ ಮಾತನಾಡಿದ್ದಾರೆ.
ಅಂತಿಮ ನಿರ್ಧಾರ ಬಾಕಿ: ಕಳೆದ ಆರೇಳು ತಿಂಗಳಲ್ಲಿ ಎರಡ್ಮೂರು ಬಾರಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವ ಇಬ್ರಾಹಿಂ, ಜೆಡಿಎಸ್ ಪಕ್ಷಕ್ಕೆ ಹತ್ತಿರವಾಗಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯನ್ನು ತಮಗೆ ನೀಡಬೇಕು ಎನ್ನುವ ಡಿಮಾಂಡ್ ಅನ್ನು ಇಬ್ರಾಹಿಂ ಅವರು ಗೌಡರ ಮುಂದಿಟ್ಟಿದ್ದರು ಎನ್ನುವ ಸುದ್ದಿಗಳು ಹರಿದಾಡಿದ್ದವು.
ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ದಳಪತಿಗಳಿಂದ ಬಂದಿತ್ತು ಎನ್ನುವುದು ಬಹಿರಂಗವಾಗಿರಲಿಲ್ಲ. ಇದೀಗ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪಕ್ಷಕ್ಕೆ ಬಂದರೆ ಸ್ವಾಗತ. ಇಬ್ರಾಹಿಂ ಬಂದರೆ ಗೌರವದ ಸ್ಥಾನ ಮಾನ ಕೊಡುತ್ತೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ಇಬ್ರಾಹಿಂ ಅವರಿಗೆ ಬಹಿರಂಗ ಆಹ್ವಾನ ಕೊಟ್ಟಿದ್ದಾರೆ.
ಆದರೆ, ಸಿ.ಎಂ. ಇಬ್ರಾಹಿಂ ಮಾತ್ರ ಜೆಡಿಎಸ್ ಸೇರುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೆಲ ದಿನಗಳಲ್ಲೇ ಇಬ್ರಾಹಿಂ ಅವರ ನಡೆ ಏನೆಂಬುದು ಗೊತ್ತಾಗಲಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ