ಬೆಂಗಳೂರು: ಮೂಲ ಕಾಂಗ್ರೆಸ್ಸಿಗರು-ವಲಸೆ ಕಾಂಗ್ರೆಸ್ಸಿಗರ ನಡುವಿನ ತಿಕ್ಕಾಟದಲ್ಲಿ ಹಲವೆಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೊಂದಲ ಹಾಗೂ ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ. ಈ ನಡುವೆ ಮಾಜಿ ಡಿಸಿಎಂ ನಾಳೆಯಾದ್ರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಳಿಯುತ್ತಾರಾ ಎಂಬ ಕುತೂಹಲ ಮೂಡಿದೆ.
ನಾಳೆ ಕೆಪಿಸಿಸಿ ತಿಳಿಸಿರುವಂತೆ ಬೆಂಗಳೂರಿನ ಎರಡು ಕ್ಷೇತ್ರದಲ್ಲಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಪ್ರಚಾರದ ಕಣಕ್ಕಿಳಿಯಬೇಕಿದೆ. ನಾಳೆ ಮಹಾಲಕ್ಷ್ಮಿ ಲೇಔಟ್ ಹಾಗೂ ಯಶವಂತಪುರ ಕ್ಷೇತ್ರದ ವಿವಿಧೆಡೆ ಅವರು ಪ್ರಚಾರ ನಡೆಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದು, ಇದು ಸಾಧ್ಯವಾಗುವುದೇ ಎನ್ನುವ ಕುತೂಹಲ ಮೂಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ಮೇಲೆ ಮುನಿಸಿಕೊಂಡಿರುವ ಪರಮೇಶ್ವರ್, ಇಬ್ಬರ ಅನುಪಸ್ಥಿತಿಯಲ್ಲಿ ಕೆಪಿಸಿಸಿ ಕಚೇರಿಯಲ್ಲಿಯೇ ನಡೆದ ಇಂದಿರಾ ಗಾಂಧಿ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇವರ ಈ ನಡೆ ಎಲ್ಲರಿಗೂ ತುಂಬಾ ಅಚ್ಚರಿ ಮೂಡಿಸುತ್ತಿದೆ.
ಕೀಲು ನೋವಿನ ಸಮಸ್ಯೆ:
ನನಗೆ ಕೀಲು ನೋವಿನ ಸಮಸ್ಯೆಯಿದೆ. ಹಾಗಾಗಿ ಮನೆಯಿಂದ ಹೆಚ್ಚಾಗಿ ಆಚೆ ಬರುತ್ತಿಲ್ಲ. ವೈದ್ಯರ ಸೂಚನೆ ಮೇರೆಗೆ ವಿಶ್ರಾಂತಿಯಲ್ಲಿದ್ದೇನೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಇತ್ತ ಸಿದ್ದರಾಮಯ್ಯ ಆಪ್ತರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಪಥನವಾಗಿದೆ ಎನ್ನುವುದನ್ನು ಬಲವಾಗಿ ನಂಬಿರುವ ಪರಮೇಶ್ವರ್, ಪಕ್ಷದ ಅದರಲ್ಲೂ ಸಿದ್ದರಾಮಯ್ಯ ನೇತೃತ್ವದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ. ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅಧಿಪತ್ಯವಿದ್ದು, ಇದರಲ್ಲಿ ತಾವು ಭಾಗಿಯಾಗಬಾರದು ಎಂಬ ನಿರ್ಧಾರಕ್ಕೆ ಪರಮೇಶ್ವರ್ ಬಂದಿದ್ದಾರೆ ಎಂಬ ಮಾತಿದೆ.
ವೇಣುಗೋಪಾಲ್ ಭೇಟಿಯಾಗಿಲ್ಲ;
ನಿನ್ನೆ ರಾತ್ರಿ ಬೆಂಗಳೂರಿಗೆ ಆಗಮಿಸಿ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಇಂದು ಬೆಂಗಳೂರಿನಲ್ಲೇ ದಿನವಿಟೀ ಇದ್ದರು. ಆದರೆ ಪರಮೇಶ್ವರ್, ಇವರನ್ನೂ ಭೇಟಿಯಾಗಿಲ್ಲ. ಅಲ್ಲದೇ ನಿನ್ನೆ ರಾತ್ರಿಯ ಸಭೆಗೂ ಆಗಮಿಸಲಿಲ್ಲ. ಒಟ್ಟಾರೆ ಕಾಂಗ್ರೆಸ್ ಪಕ್ಷದಲ್ಲಿ ಪರಮೇಶ್ವರ್ ನಡೆ ತೀವ್ರ ಕುತೂಹಲ ಮೂಡಿಸಿದ್ದು, ನಾಳೆ ಅವರು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರಾ ಅನ್ನುವುದೇ ಪ್ರಶ್ನೆಯಾಗಿದೆ.