ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಬಂಗಾಳ ಉಪಸಾಗರದ ಪಶ್ಚಿಮ ಮಧ್ಯಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಈ ಪ್ರಭಾವದಿಂದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 16ರವರೆಗೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕೆಲವೆಡೆ ಭಾರೀ ಹಾಗೂ ಅತಿಭಾರೀ ಮಳೆಯಾಗುವ ಸಾಧ್ಯತೆಯಿದೆ. ಜುಲೈ 13ರಿಂದ 16ರವರೆಗೆ ಆರೆಂಜ್ ಅಲರ್ಟ್ ಕೊಡಲಾಗಿದೆ ಎಂದು ಹೇಳಿದ್ದಾರೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರ್ಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಕೆಲವೆಡೆ ಭಾರಿ ಹಾಗೂ ಅತಿಭಾರೀ ಮಳೆಯನ್ನು ನಿರೀಕ್ಷಿಸಿದ್ದು, ಜುಲೈ 13ರಂದು ಆರೆಂಜ್ ಅಲರ್ಟ್, ಜುಲೈ 14 ಮತ್ತು 15ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಲವೆಡೆ ವ್ಯಾಪಕ ಮಳೆ
ನೈರುತ್ಯ ಮುಂಗಾರು ಕರಾವಳಿಯಲ್ಲಿ ಸಕ್ರೀಯ, ಉತ್ತರ ಒಳನಾಡಿನಲ್ಲಿ ಸಹಜ ಹಾಗೂ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ಸೋಮವಾರ ವ್ಯಾಪಕ ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಸೋಮವಾರ ಮಳೆಯಾಗಿದೆ ಎಂದಿದ್ದಾರೆ.
ಮುಖ್ಯವಾಗಿ ಶಿರಾಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ತಲಾ 12 ಸೆಂ.ಮೀ, ಉಡುಪಿ ಜಿಲ್ಲೆಯ ಕುಂದಾಪುರ, ಕೋಟ, ಕಾರವಾರದಲ್ಲಿ ತಲಾ 11 ಸೆಂ.ಮೀ, ಉತ್ತರ ಕನ್ನಡದ ಮಂಕಿಯಲ್ಲಿ 10 ಸೆಂ.ಮೀ, ಗೋಕರ್ಣ, ಆಗುಂಬೆಯಲ್ಲಿ ತಲಾ 9 ಸೆಂ.ಮೀ, ಹೊನ್ನಾವರದಲ್ಲಿ 8 ಸೆಂ.ಮೀ, ಉಡುಪಿಯ ಸಿದ್ದಾಪುರ, ಮೂಡಬಿದ್ರೆಯಲ್ಲಿ 7 ಸೆಂ.ಮೀ, ದಕ್ಷಿಣ ಕನ್ನಡದ ಮುಲ್ಕಿಯಲ್ಲಿ 6 ಸೆಂ.ಮೀ, ಕಾರ್ಕಳ, ಕದ್ರಾ, ಮಂಗಳೂರು ಮತ್ತು ಪಣಂಬೂರಿನಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ ಎಂದು ಸಿ. ಎಸ್. ಪಾಟೀಲ್ ಮಾಹಿತಿ ನೀಡಿದರು.