ಬೆಂಗಳೂರು : ರಾಜ್ಯ ಸರ್ಕಾರ ಚುನಾವಣೆಯಲ್ಲಿ ಮುಳುಗಿದೆ. ಅದಕ್ಕೆ ದುಡಿಯುವ ವರ್ಗದ ಕೂಗು ಕೇಳಿಸ್ತಿಲ್ಲ. ಹೀಗಾಗಿ, ನಾಳೆಯೂ ನಮ್ಮ ಹೋರಾಟ ವಿಭಿನ್ನವಾಗಿ ನಡೆಯಲಿದೆ. ನಾಗರಿಕರು ಹಾಗೂ ಸರ್ಕಾರದ ಗಮನ ಸೆಳೆಯಲು ತಟ್ಟೆ ಹಿಡಿದು ಭಿಕ್ಷೆ ಬೇಡುತ್ತೇವೆ. ಈ ಮೂಲಕ ಯುಗಾದಿ ಹಬ್ಬವನ್ನ ಆಚರಣೆ ಮಾಡುತ್ತೇವೆ ಎಂದು ಸಾರಿಗೆ ನೌಕರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಮಾರ್ಚ್ ತಿಂಗಳು ಕೆಲಸ ಮಾಡಿದರೂ ಇವತ್ತು ವೇತನ ಬಿಡುಗಡೆ ಮಾಡಿಲ್ಲ. ಹೀಗಾಗಿ, ನಾವು ಜನರ ಬಳಿಯೇ ಭಿಕ್ಷೆ ಬೇಡ್ತೀವಿ. ಕೆಆರ್‌ಸರ್ಕಲ್, ಸದಾಶಿವನಗರ ಸರ್ಕಲ್ ಸೇರಿ ಎಲ್ಲೆಲ್ಲಿ ದೊಡ್ಡ ಮಟ್ಟದ ಸರ್ಕಲ್ಗಳಿವೆಯೋ ಅಲ್ಲಿ ವಿನೂತನ ಮುಷ್ಕರ ಮಾಡುವುದಾಗಿ ತಿಳಿಸಿದರು.
ಹಿಂದೂ ಪ್ರತಿಪಾದಕರೇ, ಸಚಿವರೇ ನಿಮ್ಮ ಸಿಎಂಗೆ ಕಿವಿ ಮಾತು ಹೇಳಿ : ಬಿಜೆಪಿಯವರೇ ಹಿಂದೂ ಧರ್ಮ, ಹಿಂದೂ ಧರ್ಮ ಅಂತೀರಾ. ಆದರೆ, ಹಬ್ಬ ಆಚರಣೆಗೆ ವೇತನವನ್ನೇ ನೀಡುತ್ತಿಲ್ಲ. ಹಿಂದೂ ಧರ್ಮದ ಪ್ರತಿಪಾದಕರಾದ ಸಚಿವರು, ಮುಖಂಡರು ಎಲ್ಲಿ ಇದ್ದೀರಾ? ನಾವು ಉಪವಾಸ ಇರೋದು ಕಾಣ್ತಿಲ್ವಾ?. ನಿಮ್ಮ ಸಿಎಂಗೆ ಅರ್ಥ ಆಗೋ ಹಾಗೇ ತಿಳಿ ಹೇಳಿ. ವಚನ ಕೊಟ್ಟಂತೆ ಮಾತು ಉಳಿಸಿಕೊಳ್ಳಿ ಎಂದು ಕೋಡಿಹಳ್ಳಿ ಕಿಡಿಕಾರಿದರು.
ವೇತನ ತಡೆ ಹಿನ್ನೆಲೆ ಡಿಪೋ ಮ್ಯಾನೇಜರ್ಗಳ ವಿರುದ್ಧ ದೂರು : ಮಾರ್ಚ್ ತಿಂಗಳು ಕರ್ತವ್ಯ ನಿರ್ವಹಿಸಿದರೂ ಕೂಡ ವೇತನ ಬಿಡುಗಡೆ ಮಾಡದ ಹಿನ್ನೆಲೆ, ನಾಳೆ ಆಯಾ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ದೂರು ದಾಖಲು ಮಾಡಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಕಾನೂನು ಹೋರಾಟ : ಇದೇ ವೇಳೆ ಮಾತಾನಾಡಿದ ವಕೀಲ ಬಾಲನ್, ಕಾರ್ಮಿಕರ ಸಂಖ್ಯೆ 10 ಸಾವಿರಕ್ಕೂ ಹೆಚ್ಚಿದ್ದರೆ, 10ನೇ ತಾರೀಖಿನನೊಳಗೆ ವೇತನ ಆಗಬೇಕೆಂದು ಕಾನೂನಿನಲ್ಲಿದೆ. ಆದರೆ, ಈ ತನಕ ಸಾರಿಗೆ ನೌಕರರಿಗೆ ವೇತನ ಆಗಿಲ್ಲ. ಹೀಗಾಗಿ, ನಾಳೆ ಎಲ್ಲ ಕಾರ್ಮಿಕರು ದೂರು ದಾಖಲು ಮಾಡಿ ಕಾನೂನು ಹೋರಾಟ ಮಾಡುತ್ತೇವೆ ಅಂದರು.