ಬೆಂಗಳೂರು : ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರನ್ನು ಕೂಡಲೇ ಬಂಧಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಬನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ಅವರ ಜೊತೆ ಇನ್ನೊಬ್ಬರು ಮಾತನಾಡಿದ್ದಾರೆ. ಅವರ ಮೇಲೂ ಕೇಸ್ ಹಾಕಬೇಕು ಎಂದು ಒತ್ತಾಯಿಸಿದರು.
ಇಸ್ಲಾಂ ಧರ್ಮಗುರು ಪೈಂಗಬರ್ ಬಗ್ಗೆ ಮಾತನಾಡುವುದು ಸರಿಯಲ್ಲ. ಮತ್ತೊಂದು ಧರ್ಮದ ಬಗ್ಗೆ ದ್ವೇಷ ಬಿತ್ತಿದಂತಾಗುತ್ತದೆ. ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಪ್ರತಿಭಟನೆ ಹೆಸರಲ್ಲಿ ಗಲಭೆ ಎಂದಿರುವ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಯಾರೂ ಗಲಭೆ ಮಾಡಬಾರದು. ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಪ್ರತಿಭಟನಾಕಾರರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ ಎಂದರು.
ರಾಜ್ಯಸಭೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ನ ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್ ಅವರ ಸೋಲಿನ ಕುರಿತು ಮಾತನಾಡಿ, ನಮಗೆ ಗೆಲ್ಲೋಕೆ ಆಗಲ್ಲ ಅಂತ ಗೊತ್ತಿತ್ತು. ಯಾರಾದ್ರೂ ಮನಸಾಕ್ಷಿ ವೋಟ್ ಹಾಕ್ತಾರೆ ಅಂದುಕೊಂಡಿದ್ದೆವು. ಒಬ್ಬರು ಜೆಡಿಎಸ್ನವರು ಮತ ಹಾಕಿದ್ರು. ಪಕ್ಷೇತರ ಅಭ್ಯರ್ಥಿಯೊಬ್ಬರು ಮತ ಹಾಕಿದ್ರು. ನಮಗೆ 71 ಮತಗಳು ಬಂದಿವೆ. ಎರಡು ಹೆಚ್ಚುವರಿ ಮತಗಳು ಸಹ ಬಂದಿವೆ ಎಂದು ಹೇಳಿದರು. ಕಾಂಗ್ರೆಸ್ನಿಂದ ಕ್ರಾಸ್ವೋಟ್ ಎಂಬ ಆರೋಪಕ್ಕೆ ಉತ್ತರಿಸಿ, ನಮ್ಮದು ಎಲ್ಲೂ ಕ್ರಾಸ್ವೋಟ್ ಆಗಿಲ್ಲ. ಫಸ್ಟ್, ಸೆಕೆಂಡ್ ಎರಡೂ ಕ್ರಾಸ್ವೋಟ್ ಆಗಿಲ್ಲ. ನಮ್ಮವರು ನಮಗೇ ಮತ ಹಾಕಿದ್ದಾರೆ. ಬೇರೆಯವರು ಸಹ ನಮಗೆ ಹಾಕಿರಬಹುದು ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಬಿಜೆಪಿ ಬಿ ಟೀಂ ಎಂಬ ವಿಚಾರದ ಬಗ್ಗೆ ನಾನು ವ್ಯಾಖ್ಯಾನ ಮಾಡಲ್ಲ. ನಾವು ಮೈನಾರಿಟಿ ಅಭ್ಯರ್ಥಿ ಹಾಕಿದ್ವಿ. ಜೆಡಿಎಸ್ನವರು ಮೊದಲು ಕ್ಯಾಂಡಿಡೇಟ್ ಹಾಕಿದ್ರಾ? ಅವರು ಬಾಯಿಗೆ ಬಂದಂತೆ ಹೇಳ್ತಾರೆ. ನಮ್ಮ ಕ್ಯಾಂಡಿಡೇಟ್ಅನ್ನು ಒಂದು ದಿನ ಮುಂಚೆಯೇ ಹಾಕಿದ್ವಿ. ದೇವೇಗೌಡರು ಅಭ್ಯರ್ಥಿಯಾಗಿದ್ದಾಗ ನಾವು ಎದುರಾಳಿಗಳನ್ನು ನಿಲ್ಲಿಸಿರಲಿಲ್ಲ. ಆದರೆ ಜೆಡಿಎಸ್ನವರೇ ಮತ್ತೆ ಬಿ ಟೀಂ ಅನ್ನೋದನ್ನು ತೋರಿಸಿಕೊಂಡಿದ್ದಾರೆ. ಅವರು ಮತಾಂತರ ತಂದಾಗ ವಿರೋಧ ಮಾಡಿದ್ರಾ? ಅವರಿಗೆ ಸಪೋರ್ಟ್ ಮಾಡಿದ್ರು. ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧ ಮಾಡಿದ್ರಾ? ಅಲ್ಲೂ ಸರ್ಕಾರಕ್ಕೆ ಸಪೋರ್ಟ್ ಮಾಡಿದ್ರು. ಎಲ್ಲಿದೆ ಅವರಿಗೆ ಅಲ್ಪಸಂಖ್ಯಾತರ ಒಲವು ಎಂದು ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ: ಶಾಸಕ ಶ್ರೀನಿವಾಸ್ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ